ಸಾಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಂಆರ್‌ಐಎಲ್ ಸಂಸ್ಥೆಯಿಂದ ಶೌಚಗೃಹ ನಿರ್ಮಾಣದ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು. ಸತ್ಯನಾರಾಯಣ, ಬಿ.ಎ.ಇಂದೂಧರ, ಚಂದ್ರಪ್ಪ ಇತರರಿದ್ದರು. 
ನ್ಯೂಸ್

ಶಾಲಾಭಿವೃದ್ಧಿಗೆ ನೆರವು ನೀಡಲು ಮುಂದಾಗಿ

ಸೋಮಶೇಖರ ಎನ್

ಸಾಗರ: ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಂಘಸಂಸ್ಥೆಗಳು, ದಾನಿಗಳು ಸಹಕಾರ ನೀಡಬೇಕು. ಸರ್ಕಾರದಿಂದಲೇ ಎಲ್ಲ ನೀರಿಕ್ಷೆ ಮಾಡುವುದಕ್ಕಿಂತ ಸ್ಥಳೀಯವಾಗಿ ನೆರವು ನೀಡಲು ಮುಂದಾಗಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಂಆರ್‌ಐಎಲ್ ಸಂಸ್ಥೆಯಿಂದ ಕಾಲೇಜಿನಲ್ಲಿ ಶೌಚಗೃಹ ನಿರ್ಮಾಣಕ್ಕೆ ನೀಡಿರುವ 43 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಓದಿರುವ ಶಾಲೆ ಅಭಿವೃದ್ಧಿಗೆ ಸಹಕರಿಸುವ ಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಅಜೀಂ ಪ್ರೇಮ್‌ಜೀ ಫೌಂಡೇಷನ್ ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ 250 ಕೋಟಿ ರೂ. ಕೊಟ್ಟಿದೆ. ಅದೇ ರೀತಿ ಇಲ್ಲಿಗೆ ಖಾಸಗಿ ಸಂಸ್ಥೆ ಹಣ ಒದಗಿಸಿದೆ. ಇದರಿಂದ ಶಾಲಾ ವಾತಾವರಣ ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕಾಲೇಜಿನ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸಲಾಗಿದೆ. ಮಕ್ಕಳ ಆರೋಗ್ಯ ದೃಷ್ಟಿ, ಪರಿಸರ ಉತ್ತಮ ಆಗಿರಬೇಕಾದರೆ ಶೌಚಗೃಹ ವ್ಯವಸ್ಥೆ ಚೆನ್ನಾಗಿರಬೇಕು ಎಂದರು.

ಪ್ರಾಚಾರ್ಯ ಸತ್ಯನಾರಾಯಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಸುರೇಶಬಾಬು, ಚಂದ್ರಪ್ಪ, ಸಲೀಂ, ಎಲ್.ಚಂದ್ರಪ್ಪ, ಗಣಪತಿ, ಉಮೇಶ್, ಭವ್ಯಾ ಇತರರಿದ್ದರು.