ವೆಲ್ಲಿಂಗ್ಟನ್ : ಸಾವಿನ ಮನೆಯಲ್ಲೂ ಆಶಾವಾದದ ದೀಪ ಬೆಳಗಿಸುವ, ಹೋದವರ ಸಿಹಿನೆನಪನ್ನು ಹಸನಾಗಿ ಉಳಿಸುವ ಒಂದು ವಿನೂತನ ಪ್ರಯತ್ನ ನ್ಯೂಜಿಲೆಂಡ್ನ ಆಕ್ಲೆಂಡಿನ 'ಡೈಯಿಂಗ್ ಆರ್ಟ್' ಎಂಬ ಕಂಪೆನಿ ಮಾಡುತ್ತಿದೆ. ಅಲ್ಲಿನ ಜನರು ಸತ್ತವರನ್ನು ಹೂಳಲು ಬಳಸುವ ಕಾಫಿನ್ಗಳಿಗೆ ರಂಗು ತುಂಬಿ, ಆ ಅಂತಿಮ ಯಾತ್ರೆಯನ್ನು ಕುಟುಂಬಸ್ಥರಿಗೆ ಸುಲಭವಾಗಿಸುವ ಆಶಯ ಅವರದ್ದಾಗಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ನ್ಯೂಜಿಲೆಂಡ್ನ ತೌರಂಗಾದಲ್ಲಿ ಮೃತಪಟ್ಟ ಫಿಲ್ ಮೆಕ್ಲೀನ್ ಅವರ ಕಾಫಿನ್ ದೊಡ್ಡದಾದ ಕ್ರೀಂ ಡೋನಟ್ನ ಮಾದರಿಯಲ್ಲಿತ್ತು. ಈ ಕಾಫಿನ್ಅನ್ನು ಚಾಪೆಲ್ಗೆ ತಂದಾಗ ಬೇಸರದಲ್ಲಿದ್ದ ಜನರ ನಡುವೆ ಒಂದು ನಗೆಯ ಅಲೆ ಎದ್ದಿತು ಎನ್ನುತ್ತಾರೆ, ಈ ಕಾಫಿನ್ಅನ್ನು ಡಿಸೈನ್ ಮಾಡಿದ ರಾಸ್ ಹಾಲ್. "ನನ್ನ ಪತಿಯ ಕೊನೆಯ ನೆನಪು ಅವರಿಗೆ ಇಷ್ಟವಾದ ಡೋನಟ್ ರೂಪದಲ್ಲಿರಬೇಕೆಂದು ನನ್ನ ಇಚ್ಛೆಯಾಗಿತ್ತು. ಅವರ ಹಾಸ್ಯಪ್ರಜ್ನೆಯನ್ನೂ ನಾವು ಈ ಮೂಲಕ ನೆನಪಿಸಿಕೊಂಡೆವು" ಎಂದಿದ್ದಾರೆ, ಮೃತ ಮೆಕ್ಲೀನ್ ಅವರ ಪತ್ನಿ ಡೆಬ್ರಾ.
ರಾಸ್ ಹಾಲ್ರ ಡೈಯಿಂಗ್ ಆರ್ಟ್ ಸಂಸ್ಥೆಯು 15 ವರ್ಷಗಳಿಂದ ಕಾಫಿನ್ ಕೊಳ್ಳುವವರ ಬೇಡಿಕೆಯಂತೆ ರಂಗುರಂಗಾದ ಕಾಫಿನ್ಗಳನ್ನು ಡಿಸೈನ್ ಮಾಡುತ್ತಾ ಬಂದಿದೆ. ಅವರ ಇತರ ಡಿಸೈನ್ಗಳು ಸೇಲ್ಬೋಟ್, ಫೈರ್ಟ್ರಕ್, ಚಾಕೊಲೇಟ್ ಬಾರ್ ಮತ್ತು ಲೆಗೋ ಬ್ರಿಕ್ಗಳಾಗಿವೆ. ಜನರ ನೆಚ್ಚಿನ ಬೀಚ್ಗಳು ಮತ್ತು ಹಾಲಿಡೇ ಸ್ಪಾಟ್ಗಳನ್ನು ಚಿತ್ರಿಸಿದ ಕಾಫಿನ್ಗಳನ್ನೂ ಹಾಲ್ ಹೆಚ್ಚಾಗಿ ತಯಾರಿಸುತ್ತಾರಂತೆ.
"ಹದಿನೈದು ವರ್ಷದ ಹಿಂದೆ ನನ್ನ ಸಾವಿನ ಬಗ್ಗೆ ಚಿಂತಿಸಿ ವಿಲ್ ಬರೆಯಬೇಕಾದರೆ, ನನಗೆ ನನ್ನ ಕಾಫಿನ್ ಸಾಮಾನ್ಯವಾಗಿರಬಾರದು ಎಂದೆನಿಸಿತು. ಬೆಂಕಿಯ ಜ್ವಾಲೆಗಳನ್ನು ಹೊಂದಿದ ಕೆಂಪು ಬಾಕ್ಸ್ ಆಗಿರಬೇಕು ಎಂದು ನಾನು ಬರೆದಿದ್ದೆ" ಎಂದಿದ್ದಾರೆ ಹಾಲ್. ಆ ನಂತರ ಸೈನೇಜ್ ಮತ್ತು ಗ್ರ್ಯಾಫಿಕ್ಸ್ ಕಂಪೆನಿ ಹೊಂದಿದ್ದ ಹಾಲ್ ಈ ಬಣ್ಣದ ಕಾಫಿನ್ ಕೆಲಸವನ್ನು ಫುನರೆಲ್ ವ್ಯವಸ್ಥೆ ಮಾಡುವ ಜನರ ಸಹಕಾರದೊಂದಿಗೆ ಆರಂಭಿಸಿದರು ಎನ್ನಲಾಗಿದೆ. (ಏಜೆನ್ಸೀಸ್)