ತಮಿಳುನಾಡು: ಕಾಲೇಜು ವಿದ್ಯಾರ್ಥಿಗಳು ಒಟ್ಟಾಗಿ ಸೇರಿಕೊಂಡು ಹುಡುಗಾಟ ಮಾಡುವುದು ಸಹಜ. ಕಾರಣ ಅವರ ವಯಸ್ಸು. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಹುಡುಗಾಟವನ್ನು ಇತಿಮಿತಿಯಲ್ಲಿ ಮಾಡಿದರೆ ಮಾತ್ರ ಚಂದ ಎನ್ನುವುದನ್ನು ಅರಿತಿರಬೇಕು. ಇಲ್ಲವಾದರೆ ಹುಡುಗಾಟದ ವರ್ತನೇ ಉತ್ತಮ ಭವಿಷ್ಯವನ್ನೇ ಕಸಿದುಕೊಂಡು ಬಿಡಬಹುದು.
ಅದರಲ್ಲೂ ಇಂದಿನ ಬಹುತೇಕ ಕಾಲೇಜು ವಿದ್ಯಾರ್ಥಿಗಳಲ್ಲಿ ಬೈಕ್ ಇದ್ದೇ ಇದೆ. ಸ್ನೇಹಿತರ ಜತೆಗೂಡಿ ಸ್ಟಂಟ್ಸ್ ಮಾಡುತ್ತಾರೆ. ಅಪಾಯಕಾರಿ ಸಾಹಸ ಮಾಡಿ ಜೀವವನ್ನೇ ಕಳೆದುಕೊಂಡಂತಹ ಉದಾಹರಣೆಗಳು ಸಾಕಷ್ಟಿವೆ. ಇದೀಗ ಇಲ್ಲೊಂದಿಷ್ಟು ಕಾಲೇಜು ವಿದ್ಯಾರ್ಥಿಗಳು ರಸ್ತೆ ಮಧ್ಯೆ ಸರ್ಕಾರಿ ಬಸ್ಸನ್ನೇರಿ ಸಾಹಸ ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಅಪಾಯ ತಂದೊಡ್ಡುವಂತಹ ಪರಿಸ್ಥಿತಿ.
ನಗರದ ಮಧ್ಯಭಾಗದಲ್ಲಿರುವ ಬಸ್ಸ್ಟ್ಯಾಂಡ್ ಮುಂಭಾಗದಲ್ಲಿ ಬಸ್ ನಿಲ್ಲಿಸಿದ್ದಾಗ, ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ಟಾಪ್ ಮೇಲೆ ಹತ್ತಿ ಹುಡುಗಾಟ ಮಾಡಿದ್ದಾರೆ. ನೇರವಾಗಿ ಕೆಳಗಿಳಿಯದೆ ಬಸ್ಸಿನ ಮುಂಭಾಗದ ಗ್ಲಾಸ್ ಮೇಲೆ ಜಾರಿಕೊಂಡಿದ್ದಾರೆ. ಸಣ್ಣ ಮಕ್ಕಳು ಜಾರು ಬಂಡಿಯಲ್ಲಿ ಹೇಗೆ ಆಟವಾಡುತ್ತಾರೋ, ಅದೇ ಮಾದರಿಯಲ್ಲಿ ಬಸ್ಸಿನಲ್ಲಿ ಹುಚ್ಚಾಟ ಮೆರೆದಿದ್ದಾರೆ. ಒಬ್ಬ ವಿದ್ಯಾರ್ಥಿ ರಸ್ತೆ ಮೇಲೆ ನಿಂತುಕೊಂಡು ಸಹಪಾಠಿಗಳು ವರ್ತನೆಯನ್ನು ತನ್ನ ಮೊಬೈಲ್ ಕ್ಯಾಮರಾ ಮೂಲಕ ಫೋಟೊ ತೆಗೆದಿದ್ದಾನೆ. ಇವರ ಪುಂಡಾಟಿಕೆಯನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿದ್ಯಾರ್ಥಿಗಳ ವರ್ತನೆ ನೋಡಿದ ಬಸ್ಸಿನ ಡ್ರೈವರ್ ಹಾಗೂ ಕಂಡೆಕ್ಟರ್ ಬೈದು ಬುದ್ಧಿ ಹೇಳಿ, ಕೆಳಗಿಳುಯುವಂತೆ ಸೂಚಿಸಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ವಿದ್ಯಾರ್ಥಿಗಳು ಮತ್ತದೇ ಹುಚ್ಚಾಟ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. (ಏಜೆನ್ಸೀಸ್)