ನ್ಯೂಸ್

ರೈಲ್ವೆ ನಿಲ್ದಾಣದಲ್ಲಿ ಪರಸ್ಪರ ಬಡಿದಾಡಿಕೊಂಡ ಕಾಲೇಜು ವಿದ್ಯಾರ್ಥಿನಿಯರು; ಘಟನೆಯ ದೃಶ್ಯ ವೈರಲ್​

ಬಿಹಾರ: ಬಿಹಾರದ ಅರಾ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ನಡುವೆ ಮಾತಿಗೆ ಮಾತು ಬೆಳೆದು, ಪರಸ್ಪರ ಹೊಡೆದಾಟ ನಡೆದಿದೆ. ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ನಡುವೆ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಮಾತಿನ ಜಟಾಪಟಿ ತಾರಕಕ್ಕೇರುತ್ತಿದ್ದಂತೆ ದೈಹಿಕವಾಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದು, ಇಬ್ಬರ ಜಗಳವನ್ನು ತಡೆಯಲು ಮತ್ತೊಬ್ಬ ಹುಡುಗಿ ಮಧ್ಯಪ್ರವೇಶಿಸಿ ಶಾಂತಗೊಳಿಸಲು ಪ್ರಯತ್ನಿಸಿದ್ದಾಳೆ.

ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ವಿದ್ಯಾರ್ಥಿನಿಯರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹುಡುಗಿಯರ ಗುರುತು ಮತ್ತು ಅವರ ವಿಳಾಸದ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).