ಬೆಂಗಳೂರು: (Collection of money for e-KYC) ಬೋಗಸ್ ಕಾರ್ಡ್ ಪತ್ತೆ ಮತ್ತು ಪಡಿತರ ಸೋರಿಕೆ ತಡೆಗೆ ಆಹಾರ ಇಲಾಖೆಯು ರಾಜ್ಯಾದ್ಯಂತ ರೇಷನ್ ಕಾರ್ಡ್‌ಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ, ಬಿಪಿಎಲ್ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸುತ್ತಿದ್ದಾರೆ. ಆದರೆ, ಕೆಲ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಇಕೆವೈಸಿ ಮಾಡಿಸಲು ಕಾರ್ಡ್‌ದಾರರಿಂದ 100 ರೂ.ನಿಂದ 500 ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ.
ಇದರ ಬಗ್ಗೆ ಪ್ರಶ್ನೆ ಮಾಡುವವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ವರ್ತಕರು, ಹಣ ಕೊಡದಿದ್ದರೆ ಸರ್ವರ್ ಸಮಸ್ಯೆ ಇದೆ ಎಂದೇಳಿ ಕಾರ್ಡ್‌ದಾರರನ್ನು ವಾಪಸ್ ಕಳುಹಿಸುತ್ತಿರುವುದು ಘಟನೆಗಳು ಅಲ್ಲೆಲ್ಲಿ ನಡೆಯುತ್ತಿವೆ.
ಬೆಂಗಳೂರಿನ ಲಕ್ಕಸಂದ್ರದ 9ನೇ ಮಖ್ಯರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯವರು ಇಕೆವೈಸಿ ಮಾಡಿದಕ್ಕೆ ಗೂಗಲ್ ಪೇ ಮೂಲಕ ಕಾರ್ಡ್‌ದಾರರಿಂದ 500 ರೂ. ಹಣ ತೆಗೆದುಕೊಂಡಿರುವ ದಾಖಲೆಗಳು ವಿಜಯವಾಣಿಗೆ ಲಭ್ಯವಿದೆ. ಕೆಲವೊಂದು ಕಡೆಗಳಲ್ಲಿ ಕಾರ್ಡ್‌ದಾರರಿಂದ ಕನಿಷ್ಠ 100 ರೂ. ವಸೂಲಿ ಮಾಡಲಾಗುತ್ತಿರುವ ಬಗ್ಗೆ ದೂರುಗಳಿವೆ.
ಹಣ ಕೊಡಬೇಡಿ:
ಇಕೆವೈಸಿ ಮಾಡಲು ನ್ಯಾಯಬೆಲೆ ಅಂಗಡಿಯವರಿಗೆ ಸರ್ಕಾರವೇ ಹಣ ಕೊಡುತ್ತದೆ, ಹಾಗಾಗಿ, ಕಾರ್ಡ್‌ದಾರರು ಹಣ ಕೊಡುವ ಅಗತ್ಯವಿಲ್ಲ. ಹಣಕ್ಕೆ ಬೇಡಿಕೆ ಇಟ್ಟರೆ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಥವಾ ಆಯುಕ್ತರ ಕಚೇರಿಗೆ ದೂರು ನೀಡುವ ಅವಕಾಶ ಇದೆ. ಇಕೆವೈಸಿ ಅವಧಿಯನ್ನು ಅ.20ವರೆಗೆ ವಿಸ್ತರಿಸಲಾಗಿದೆ.
ರೇಷನ್ ಕಾರ್ಡ್‌ನ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಬೇಕು. ಅ.1ರಿಂದ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ, ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆಯಬೇಕು. ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿಮನೆಗೆ ವಾಪಸ್ ಬರುವಾಗ ಅನುಕೂಲಕರ ಸಮಯದಲ್ಲಿ ಪಡಿತರ ಪಡೆದುಕೊಳ್ಳಬಹುದು.