ನ್ಯೂಸ್

ಭೂವಿವಾದಗಳಿಗೆ ತಲೆ ಹಾಕಬೇಡಿ: ಖಾಕಿಪಡೆಗೆ ಸಿಎಂ ಫರ್ಮಾನು

ಬೆಂಗಳೂರು: ಇತ್ತೀಚೆಗೆ, ರಾಜ್ಯದಲ್ಲಿ ನಡೆಯುತ್ತಿರುವ ಭೂವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥಪಡಿಸಲು ಯತ್ನಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಬೆಂಗಳೂರು ಸುತ್ತ-ಮುತ್ತಲೂ ಹಲವು ಭೂ ವ್ಯಾಜ್ಯಗಳಿವೆ. ಈ ಭೂವಿವಾದಗಳಲ್ಲಿ ಮಧ್ಯಪ್ರವೇಶಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಭೂ ಮಾಫಿಯಾ ಜತೆ ಪೊಲೀಸರು ಶಾಮೀಲಾಗಬಾರದು. ಯಾವುದೇ ಹಂತದಲ್ಲಿ ಏಜೆಂಟ್‌ಗಳು, ಅಪರಾಧ ಹಿನ್ನೆಲೆ ಉಳ್ಳವರ ಜತೆ ಸಂಬಂಧ ಇಟ್ಟುಕೊಳ್ಳಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಬೊಮ್ಮಾಯಿ ಹೇಳಿದರು.

ಮರಳು ಮಾಫಿಯಾದಲ್ಲಿ ಕೈ ಜೋಡಿಸಬೇಡಿ: ನದಿಪಾತ್ರ ಹೆಚ್ಚಿರುವ ಪ್ರದೇಶಗಳಿರುವ ಜಿಲ್ಲೆಗಳಲ್ಲಿ ಮರಳು ಕದಿಯುವ ಮಾಫಿಯಾ ಜತೆ ಪೊಲೀಸರು ಕೈ ಜೋಡಿಸಬಾರದು. ಈ ತರಹದ ಹಲವಾರು ವಿಚಾರಗಳಲ್ಲಿ ನಿರ್ದೇಶನ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ ಇನ್ನಷ್ಟು ಸ್ಥಿತಿ ಸುಧಾರಿತವಾಗಬೇಕು ಎಂದು ಸಿಎಂ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಇಲಾಖೆ ಆಧುನೀಕರಣ: ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ರಾಜ್ಯದಲ್ಲಿ ದೊಡ್ಡ ಕಮ್ಯಾಂಡ್ ಸೆಂಟರ್ ಬರುತ್ತಿದೆ. 6 ಫೊರೆನ್ಸಿಕ್ ಲ್ಯಾಬ್‌ಗಳಿಗೆ ಅನುಮೋದನೆ ಕೊಟ್ಟಿದ್ದೇವೆ. ಇಲಾಖೆಯ ಆಧುನೀಕರಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರ್ಥಿಕ ಮತ್ತು ಸೈಬರ್ ಕ್ರೈಂ ನಿಯಂತ್ರಣಕ್ಕೆ ಪ್ರತ್ಯೇಕ ತಾಂತ್ರಿಕ ವಿಭಾಗವನ್ನು ರಚಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಐಎಸ್‌ಡಿಯ ಬಲವರ್ಧನೆ, ಕರಾವಳಿಯಲ್ಲಿ ನಿಗಾ ವಹಿಸಲು ಹೈಸ್ಪೀಡ್ ಬೋಟುಗಳ ಖರೀದಿ, ಮಧ್ಯಮ ಮಟ್ಟದ ಅಧಿಕಾರಿಗಳಿಗೆ ಎನ್‌ಡಿಎ ಮಟ್ಟದ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಂಧೀಖಾನೆ, ಅಗ್ನಿಶಾಮಕ ದಳದ ಸುಧಾರಣೆಯಾಗಬೇಕು. ಗುಪ್ತಚರ ವಿಭಾಗ ಮತ್ತು ಸಿಓಡಿ ವಿಭಾಗದ ಪುನರ್ ರಚನೆ ಹಾಗೂ ತಾಂತ್ರಿಕವಾಗಿ ಮೇಲ್ದರ್ಜೆಗೆರಿಸಲಾಗುವುದು ಎಂದು ಹೇಳಿದರು.

ಡ್ಯಾಶ್ ಬೋರ್ಡ್: ಪೊಲೀಸ್ ಮಹಾ ನಿರ್ದೇಶಕರಿಂದ ಹಿಡಿದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮದೇ ಡ್ಯಾಶ್ ಬೋರ್ಡ್‌ಗಳನ್ನು ಹೊಂದಿರಬೇಕು. ಎಲ್ಲ ಮಾದರಿಯ ಅಪರಾಧಗಳ ಪಟ್ಟಿ, ಪತ್ತೆಯಾಗಿರುವ ಪ್ರಕರಣಗಳು, ದಸ್ತಗಿರಿ ಆಗಿರುವ ಸಂಖ್ಯೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಡ್ಯಾಶ್ ಬೋರ್ಡ್ ಲಭ್ಯವಿರಬೇಕು ಎಂದರು.

ಡ್ರಗ್ಸ್‌ಗೆ ಕಡಿವಾಣ: ಕಳೆದ ಎರಡು ವರ್ಷಗಳಲ್ಲಿ ಮಾದಕ ವಸ್ತು ಮಾಫಿಯಾವನ್ನು ನಿಯಂತ್ರಣಕ್ಕೆ ತರಲಾಗಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಪರಾಧ ನಿಯಂತ್ರಣ ಮತ್ತು ಸಾಮಾಜಿಕ-ಕಾನೂನು ವ್ಯವಸ್ಥೆಗೆ ನೇರ ಸಂಪರ್ಕವಿದ್ದು, ಅಪರಾಧಗಳನ್ನು ನಿಯಂತ್ರಿಸಿದಾಗ ಮಾತ್ರ ಕಾನೂನು ವ್ಯವಸ್ಥೆ ಸುಸ್ಥಿತಿಗೆ ಬರುತ್ತದೆ. ಪೊಲೀಸ್ ಇಲಾಖೆಯಲ್ಲಿ ವ್ಯವಸ್ಥೆಯ ಸುಧಾರಣೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.