ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರ ಹಾಗೂ ಸಮುದಾಯದ ನಡುವೆ ಸಂಘರ್ಷ ಶುರುವಾಗಿದೆ. ಪ್ರತಿಭಟನೆ ವೇಳೆ ಪಂಚಮಸಾಲಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಒತ್ತಾಯ ಮಾಡುತ್ತಿರುವುದು ಸಂವಿಧಾನದ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ನಮ್ಮ ರಾಜ್ಯದಲ್ಲಿ 2002ರಲ್ಲಿ ಮೀಸಲಾತಿ ವಿಭಾಗ ಆಯಿತು. ಆಗ ಯಾಕೆ ಪಂಚಮಸಾಲಿ ಮೀಸಲಾತಿ ಬೇಕು ಎಂದು ಒತ್ತಾಯ ಹಾಕಲಿಲ್ಲ. 2021-22ರಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ಬೇಕು ಎಂದು ಚಳುವಳಿ ಪ್ರಾರಂಭವಾಯಿತು. ಅಂದಿನ ಸರ್ಕಾರದಲ್ಲಿ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಈ ಹೋರಾಟ ಪ್ರಾರಂಭ ಮಾಡಲಾಯಿತೆಂದು ಆರೋಪಿಸಿದ್ದಾರೆ.
ಬೊಮ್ಮಾಯಿ ಸರ್ಕಾರ 2ಸಿ ಮತ್ತು 2ಡಿ ಎಂದು ಹೊಸ ಮೀಸಲಾತಿ ವ್ಯವಸ್ಥೆ ಜಾರಿ ಮಾಡಿ ಒಕ್ಕಲಿಗರಿಗೂ ಮತ್ತು ಲಿಂಗಾಯತರಿಗೂ ಮುಸ್ಲಿಮರ 4% ಮೀಸಲಾತಿ ಕಡಿತ ಮಾಡಿ ತಲಾ 2% ಮೀಸಲಾತಿ ಕೊಟ್ಟಿದ್ದರು. ಇದನ್ನ ವಿರೋಧಿಸಿ ರಾಘವೇಂದ್ರ ಎಂಬುವವರು ಕೋರ್ಟ್‌ನಲ್ಲಿ ಕೇಸ್ ಹಾಕಿದರು. ಆಗ ಬೊಮ್ಮಾಯಿ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ತುಳಿಸಿ ಮದ್ದಿನೇನಿ ನಾವು 2002ರಲ್ಲಿ ಆಗಿರುವ ಜಾತಿ ವಿಭಾಗಗಳ ಮೀಸಲಾತಿ ವಿಂಗಡನೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡೋದಿಲ್ಲ ಎಂದು ಅಫಿಡವಿಟ್ ಕೊಟ್ಟರು.
ಬೊಮ್ಮಾಯಿ ಸರ್ಕಾರ ಮಾಡಿದ 2ಸಿ ಮತ್ತು 2ಡಿ ಯಾವ ಸಂವಿಧಾನ ಎಂದು ಗೊತ್ತಿಲ್ಲ. ಮುಸ್ಲಿಮರ 4% ಮೀಸಲಾತಿ ತೆಗೆದು ಒಕ್ಕಲಿಗ ಮತ್ತು ಲಿಂಗಾಯತರಿಗೆ ನೀಡಿದರು. ಮುಸ್ಲಿಮರ 4% ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಯಾಕೆ ರದ್ದು ಮಾಡಿತ್ತು. ಬೊಮ್ಮಾಯಿ ಸರ್ಕಾರದ 2ಸಿ ಮತ್ತು 2ಡಿ ವರ್ಗ ಮೀಸಲಾತಿ ವಿರೋಧಿಸಿ ಗುಲಾಂ ರಸೂಲ್ ಸುಪ್ರೀಂಕೋರ್ಟ್‌ಗೆ ಹೋದರು. ಅಲ್ಲಿ ಬೊಮ್ಮಾಯಿ ಸರ್ಕಾರ ಮುಂದಿನ ಆದೇಶದವರೆಗೂ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲ್ಲ ಎಂದು ಅಫಿಡವಿಟ್ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಸಿಎಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷಗಳು ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದು ಸರಿಯಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಗಿ ಮಾತಿನ ಚಕಮಕಿ ನಡೆಯಿತು. ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.