ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರತೀಯ ಯುವ ಕಾಂಗ್ರೆಸ್ (IYC) ಆಯೋಜಿಸಿದ್ದ "ಉತ್ತಮ ಭಾರತದ ಅಡಿಪಾಯ" ರಾಷ್ಟ್ರೀಯ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Jagadish Shettar Sees ‘Irony’ In BJP’s Situation | ಬಿಜೆಪಿ ಪರಿಸ್ಥಿತಿ ಕಂಡು ಜಗದೀಶ್ ಶೆಟ್ಟರ್ ವ್ಯಂಗ್ಯ
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, "ನಿರುದ್ಯೋಗ, ಬಡತನ ಹೆಚ್ಚಾಗುವಾಗಲೇ ದೇಶದಲ್ಲಿ ದ್ವೇಷವನ್ನು ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ. ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ, ವೈಜ್ಞಾನಿಕ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದ್ರೆ, ಈ ಸಮಾವೇಶ ನಮ್ಮ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ" ಎಂದು ಟ್ವೀಟ್ನಲ್ಲಿ ಹೇಳಿದರು.
"ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ - ಆರ್.ಎಸ್.ಎಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ. ಈ ದೇಶದ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ಈ ರೈತ-ಕಾರ್ಮಿಕ-ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನೇ ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಈ ದೇಶದ ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ" ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.