ಬೆಂಗಳೂರು: ಇಂದು ಬೆಳಗ್ಗೆ 8:30ರ ಸುಮಾರಿಗೆ ಶುರುವಾದ ಸದನದಲ್ಲಿ ವಿಪಕ್ಷ ನಾಯಕರ ಆರೋಪಗಳು ಇಂದೂ ಸಹ ಭುಗಿಲೆದ್ದಿವೆ. ಈ ಮಧ್ಯೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹನಿಟ್ರ್ಯಾಪ್ ಗದ್ದಲ ಇದೀಗ ದೊಡ್ಡ ಮಟ್ಟದ ಕೋಲಾಹಲಕ್ಕೆ ಕಾರಣವಾಗಿದೆ. ಇಂದೂ ಸದನದಲ್ಲಿ ಇದೇ ವಿಷಯಕ್ಕೆ ಭಾರೀ ಹೈಡ್ರಾಮಾ ನಡೆಯುತ್ತಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
"ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಬಗ್ಗೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದು ಪರಮೇಶ್ವರ್ ಭರವಸೆ ನೀಡಿದ ಮೇಲೆಯೂ ವಿಪಕ್ಷಗಳ ಶಾಸಕರು ಸದನದಲ್ಲಿ ಪುನ: ಅದನ್ನೇ ಪ್ರಸ್ತಾಪಿಸುವುದು ತರವಲ್ಲ" ಎಂದಿದ್ದಾರೆ.
"ಇಂತಹ ಪ್ರಕರಣದಲ್ಲಿ ಯಾರೇ ತೊಂದರೆಗೆ ಒಳಗಾಗಿದ್ದರೂ ಅವರಿಗೆ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ" ಎಂದರು.
ಇದನ್ನೂ ಓದಿ: ಮೊಬೈಲ್ನಲ್ಲಿ ಬಿಜಿಯಾಗಿ ಕುರ್ಚಿ ಕೆಳಗೆ ಹಾವಿರುವುದನ್ನು ಗಮನಿಸದ ವಿದ್ಯಾರ್ಥಿನಿ: ನಡದೇ ಹೋಯ್ತು ಘೋರ ದುರಂತ! Snake Bites
"ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸದಸ್ಯರು ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿರುವುದು ನೋವಿನ ವಿಚಾರ. ರಾಜ್ಯದ ಕೋಟ್ಯಂತರ ಜನರ ಆಶೋತ್ತರಗಳನ್ನು, ದುಃಖ ದುಮ್ಮಾನಗಳನ್ನು ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿರುವುದು ನಮ್ಮ ಕರ್ತವ್ಯ. ಇದಕ್ಕೆ ವಿಪಕ್ಷಗಳು ಪ್ರತಿಭಟನೆ ಕೈಬಿಟ್ಟು ನಮ್ಮ ಜೊತೆ ಸಹಕರಿಸಬೇಕು" ಎಂದು ಹೇಳಿದರು.