ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ ಆಗಾಗ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಾ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ. "ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಟ್ಟಿಲ್ಲ’’ ಎನ್ನುವುದು ಅವರ ಇತ್ತೀಚಿನ ಸಂಶೋಧನೆ. ಅಶೋಕ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾಕೆ ಇಷ್ಟೊಂದು ಸಿಟ್ಟು? ಮತ್ಸರ? ಅದರ ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಯಾಕೆ ನಿಮಗೆ ಇಷ್ಟೊಂದು ದ್ವೇಷ, ಅಸಹನೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮ್ಯಾಚ್ ಗೆಲ್ಲುವುದು ಬಿಟ್ಟು ಇನ್ನೆಲ್ಲಾ ಮಾಡ್ತೀಯಾ! ಆಜಂ ಖಾನ್ವಿರುದ್ಧ ಪಾಕ್ ಕ್ರಿಕೆಟ್ ಫ್ಯಾನ್ಸ್ ಗರಂ
"ರಾಜ್ಯದ ಜನತೆ ಮಾತ್ರವಲ್ಲ ದೇಶದ ಜನತೆ ಕೂಡಾ ಸೋಲಿಸಿದ್ದು ನರೇಂದ್ರ ಮೋದಿ. ಗ್ಯಾರಂಟಿಗಳನ್ನೇ ಹೊರತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನಲ್ಲ. ಅಶೋಕ ಅವರೇ, ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ. ಕಳೆದ ಲೋಕಸಭಾ ಚುನಾವಣೆಗಿಂತ ಶೇಕಡಾ 13 ರಷ್ಟು ಹೆಚ್ಚು ಮತಗಳನ್ನು ರಾಜ್ಯದ ಮತದಾರರು ಈ ಬಾರಿ ನಮಗೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮತಪ್ರಮಾಣದ ಅಂತರ ಕೇವಲ 0.63. ಈಗ ಹೇಳಿ ಗೆದ್ದವರು ಯಾರು? ಸೋತವರು ಯಾರು?" ಎಂದಿದ್ದಾರೆ.
"ನಮ್ಮ ಗೆಲುವಿನಿಂದ ನಾವು ತೃಪ್ತರಲ್ಲದೆ ಇದ್ದರೂ ರಾಜ್ಯದ ಜನ ಗೆಲ್ಲಿಸಿದ್ದು ನಮ್ಮನ್ನು, ಸೋಲಿಸಿದ್ದು ನಿಮ್ಮನ್ನು ಎನ್ನುವುದನ್ನು ಮರೆಯದಿರಿ. ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ, 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ನಾವು ಏರುವುದನ್ನೂ ನಿಮಗೆ ತಪ್ಪಿಸಲಾಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ. ಆ ಮೇಲೆ ಕಾಂಗ್ರೆಸ್ ಪಕ್ಷದ ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಿ" ಎಂದು ವ್ಯಂಗ್ಯವಾಡಿದ್ದಾರೆ.