ನ್ಯೂಸ್

ಕೋವಿಡ್​ನಲ್ಲಿ ಮನುಷ್ಯತ್ವದ ಕೆಲಸ ಮಾಡಿದ್ರು, ರಾಷ್ಟ್ರಮಟ್ಟದ ಅತ್ಯುನ್ನತ ಪ್ರಶಸ್ತಿ ಕೊಡಬೇಕಿತ್ತು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಲೀಲಮ್ಮನ ಪಾರ್ಥೀವ ಶರೀರಕ್ಕೆ ನಮಿಸಿ, ಅವರ ಕುರಿತಂತೆ ಒಂದಷ್ಟು ವಿಚಾರಗಳನ್ನು ಜನರೊಂದಿಗೆ ಹಂಚಿಕೊಂಡರು.

ಲೀಲಾವತಿಯವರ ಅಗಲಿಕೆ ಬಗ್ಗೆ ಮಾತನಾಡಿದ ಸಿಎಂ, "ಅವರನ್ನು ಒಂದು ವಾರದ ಹಿಂದೆಯಷ್ಟೇ ಫಾರ್ಮ್ ಹೌಸ್​ನಲ್ಲಿ ಭೇಟಿ ಮಾಡಿದ್ದೆ,

ವಿನೋದ್ ರಾಜ್​ಗೆ ಧೈರ್ಯ ಹೇಳಿ, ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ತಿಳಿಸಿದ್ದೆ. ಹಾಗೆಯೇ ಏನಾದರೂ ಸಹಾಯ ಬೇಕಾ ಅಂತ ಕೂಡ ಕೇಳಿದ್ದೆ, ಆದ್ರೆ, ಅವರೇನು ಕೇಳಲಿಲ್ಲ. ಲೀಲಾವತಿ ಅವರು ರಂಗಭೂಮಿ ಹಿನ್ನಲೆಯಿಂದ ಬಂದವರು. ಎಲ್ಲಾ ಭಾಷೆಯಲ್ಲಿ ಅಭಿನಯಿಸಿದ್ದು, ಎಲ್ಲಾ ಪಾತ್ರಕ್ಕೂ ಜೀವ ತುಂಬಿದ್ದಾರೆ" ಎಂದರು.

"ಬಹಳಷ್ಟು ಮನೋಜ್ಞವಾಗಿ ಅಭಿನಯ ಮಾಡುವಂತ ಕಲೆಯನ್ನು ಅವರು ಅಳವಡಿಸಿಕೊಂಡಿದ್ದರು. ಒಟ್ಟಾರೆ ಪರಿಪೂರ್ಣ ಕಲಾವಿದೆಯವರು. ಐತಿಹಾಸಿಕ ಹಾಗೂ ಸಾಮಾಜಿಕ ಪಾತ್ರವನ್ನು ಬಹಳ ಲೀಲಾಜಾಲವಾಗಿ ಮಾಡಿದಂತ ನಟಿ. 'ಭಕ್ತಕುಂಬಾರ'ದಲ್ಲಿ ಅವರ ಅಭಿನಯ ಬಹಳಷ್ಟು ಚೆನ್ನಾಗಿತ್ತು, ಪಾತ್ರಕ್ಕೆ ಜೀವ‌ ತುಂಬುವ ಕೆಲಸ ಬಹಳಷ್ಟು ಪ್ರಾಮುಖ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ" ಎಂದರು.

"ಪಶುಸಂಗೋಪನೆ ಆಸ್ಪತ್ರೆ ಸ್ಥಾಪಿಸಿದ್ದಾರೆ. ಯಾವುದೇ ಜೀವರಾಶಿ ಕಂಡರು ಅದನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು. ಧಯೆ ತೋರಿಸಬೇಕು, ಧಯಯೇ ಧರ್ಮದ ಮೂಲವಯ್ಯ. ಅವರಿಗೆ ರಾಷ್ಟ್ರ ಮಟ್ಟದ ಅತ್ಯುನ್ನತ ಪ್ರಶಸ್ತಿ ಕೊಡಬೇಕಿತ್ತು, ಆದರೆ ಸಿಗಲಿಲ್ಲ. ಕೋವಿಡ್ ವೇಳೆ ಮನುಷ್ಯತ್ವದ ಕೆಲಸ ಮಾಡಿದ್ದರು" ಎಂದು ಸಿಎಂ ಲೀಲಾವತಿ ಅವರ ಕೆಲಸಗಳನ್ನು ಸ್ಮರಿಸಿ ಮಾತನಾಡಿದರು.