ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮಗೆ ಇರುವ ಅಧಿಕಾರವನ್ನು ಬಳಸಿಕೊಂಡು ಶಾಸಕರ ಸಭೆ ಮಾಡುತ್ತಿದ್ದು, ಇದರಲ್ಲಿ ತಪ್ಪೇನಿದೆ ” ಎಂದು ಡಿಸಿಎಂ DK ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.“ಸುರ್ಜೆವಾಲ ಅವರು ಶಾಸಕರನ್ನು ಭೇಟಿ ಮಾಡಿದ ಬಳಿಕ ಅನೇಕ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದು, ಶಾಸಕರ ಅಹವಾಲುಗಳ ವಿಚಾರವಾಗಿ ಸಿಎಂ ಸಭೆ ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಈ ಬಗ್ಗೆ ನನಗೆ ಯಾವುದೇ ಆಕ್ಷೇಪ ಇಲ್ಲ. ಈ ವಿಚಾರದಲ್ಲಿ ನನಗೆ ಏನೂ ಕಷ್ಟವಾಗದಿದ್ದರೂ, ನಿಮಗೆ ಏಕೆ ಕಷ್ಟವಾಗುತ್ತಿದೆ" ಎಂದು ಮರುಪ್ರಶ್ನಿಸಿದರು.
ನೀವು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿದ್ದು ನಿಮ್ಮನ್ನು ಕರೆದಿಲ್ಲ ಎಂದಾಗ, "ಈ ವಿಚಾರವಾಗಿ ನನಗೆ ಯಾವುದೇ ಆಕ್ಷೇಪವಿಲ್ಲ. ಬೆಂಗಳೂರಿನ ಅಭಿವೃದ್ದಿಗೆ ನಾವು ಪ್ರತ್ಯೇಕ ಅಜೆಂಡಾ ಹೊಂದಿರುವ ಕಾರಣಕ್ಕೆ ಆನಂತರ ಚರ್ಚೆ ನಡೆಸುತ್ತೇವೆ. ಬೆಂಗಳೂರಿನ ಅಭಿವೃದ್ದಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಾನು ಸಹ ಒಂದಷ್ಟು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇನೆ” ಎಂದರು.
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, “ಇದರಲ್ಲಿ ತಪ್ಪೇನಿದೆ. ಹಿರಿಯ ನಾಯಕರು ಅವರು, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ಯಾವ ತರಹದ್ದು ತಪ್ಪೇನಿಲ್ಲ” ಎಂದರು. “ಈ ಬಗ್ಗೆಯೂ ಚರ್ಚೆ ಮಾಡುವುದರಲ್ಲಿ ತಪ್ಪೇನಿದೆ. ಅವರವರ ಅಭಿಪ್ರಾಯ ಅವರು ತಿಳಿಸುತ್ತಾರೆ” ಎಂದರು.
ಬಿಜೆಪಿಯವರು ಯೂರಿಯ ಕೊರತೆ ಬಗ್ಗೆ ಪ್ರತಿಭಟನೆ ನಡೆಸುವ ಬಗ್ಗೆ ಕೇಳಿದಾಗ, “ಬಿಜೆಪಿ ಅವರ ಮೇಲೆ ಅವರೇ ಪ್ರತಿಭಟನೆ ಮಾಡಿಕೊಳ್ಳಬೇಕು ಅಷ್ಟೇ. ಈ ಹಿಂದೆ ಗೊಬ್ಬರ ಕೊಡಲು ಆಗದೇ ರೈತರ ಮೇಲೆ ಗುಂಡು ಹಾರಿಸಿದ್ದರು. ನಾವು ಅಂತಹ ಕೆಲಸ ಮಾಡುವುದಿಲ್ಲ. ಮಳೆ ಹೆಚ್ಚಾಗಿರುವ ಕಾರಣ ಕೃಷಿ ಚಟುವಟಿಕೆ ಜಾಸ್ತಿಯಾಗಿದೆ. ಹೀಗಾಗಿ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಸಂಸದರು ಒಪ್ಪಿಕೊಂಡಿದ್ದಾರೆ. ಕೂಡಲೇ ಗೊಬ್ಬರ ಸಿಕ್ಕರೆ ನಮ್ಮ ರೈತರಿಗೆ ಒಳ್ಳೆಯದಾಗುತ್ತದೆ ಎಂದು ನಾವು ಒತ್ತಡ ಹಾಕುತ್ತಿದ್ದೇವೆ" ಎಂದರು.