ನ್ಯೂಸ್

ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಕಡಿತ ಮಾಡಬೇಡಿ: ಸಿಎಂ ಸೂಚನೆ

ಬೆಂಗಳೂರು: ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ 1.50 ರೂ. ಕಡಿತ ಮಾಡಿ ಬೆಂಗಳೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಆದೇಶ ಹೊರಡಿಸಿತ್ತು.

ದರ ಕಡಿತ ಮಾಡಿರುವುದರ ವಿರುದ್ಧ ಹೈನುಗಾರರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಇದೀಗ ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಿಎಂ ಚರ್ಚೆ ನಡೆಸಿ, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಬೇಸಿಗೆ ಸಮಯದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರತಿ ಲೀಟರ್​ಗೆ 2.85 ರೂಪಾಯಿ ಪ್ರೋತ್ಸಾಹ ಧನ ಘೋಷಿಸಲಾಗಿತ್ತು. ಇದೀಗ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಹಸಿರು ಮೇವಿನ ಸಮಸ್ಯೆ ಬಗೆಹರಿದಿದೆ. ಇದರಿಂದ ಹಾಲು ಉತ್ಪಾದನೆಯಲ್ಲೂ ಹೆಚ್ಚಳವಾಗಿದೆ. ಹೀಗಾಗಿ ಪ್ರೋತ್ಸಾಹ ಧನ ಕಡಿತಗೊಳಿಸಲು ನಿರ್ಧಾರ ಮಾಡಲಾಗಿತ್ತು.