ನ್ಯೂಸ್

700 ಕೋಟಿ ರೂ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ, ಇಲ್ಲಾಂದ್ರೆ ನೀವು...: ಪ್ರಧಾನಿ ಮೋದಿಗೆ CM Siddaramaiah ಸವಾಲು

Webdesk - Manjunatha B

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮಾತಿನ ಭರಾಟೆ ಜೋರಾಗುತ್ತಿದ್ದು, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಇನ್ನೂ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ (PM Modi) ರಾಜ್ಯ ಕಾಂಗ್ರೆಸ್​ ಸರ್ಕಾರ ಕರ್ನಾಟಕದ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯಿಸಿದ್ದು, ಒಂದು ವೇಳೆ ಅದನ್ನು ಸಾಬೀತು ಮಾಡಿದ್ದಲ್ಲಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah), ಕಾಂಗ್ರೆಸ್ ಸರ್ಕಾರ ಕರ್ನಾಟಕದ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಆರೋಪ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಪ್ರಧಾನಿ ಮೋದಿಗೆ (PM Modi) ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಬಿಜೆಪಿ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಯಡಿಯೂರಪ್ಪನವರು ಹಾಗೂ ಬಸವರಾಜ್​ ಬೊಮ್ಮಾಯಿ ಎರಡು ಸಾವಿರ ಕೋಟಿ ರೂಪಾಯಿ ಕೊಟ್ಟು ಸಿಎಂ ಆಗಿದ್ದರು. ವಿಜಯೇಂದ್ರ ಕೂಡ ದುಡ್ಡು ಕೊಟ್ಟು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಇಂಥವರಿಗೆ ವೋಟ್ ಹಾಕಬೇಕಾ ಎಂದು ಪ್ರಶ್ನಿಸಿದ್ದಾರೆ. ಟೆಂಡರ್ ಕರೆಯದೆ, ಸಂಪುಟದ ಒಪ್ಪಿಗೆ ಇಲ್ಲದೆ ಪ್ರತಿ ಪಿಪಿಇ ಕಿಟ್​ಗೆ 2,147 ರೂ. ನೀಡಿ ಚೀನಾದಿಂದ ಯಡಿಯೂರಪ್ಪ, ಶ್ರೀರಾಮುಲು ಸೇರಿ 3 ಲಕ್ಷ ಪಿಪಿಇ ಕಿಟ್ ಖರೀದಿ ಖರೀದಿಸಿದ್ದಾರೆ. ಪ್ರಧಾನಿ ಮೋದಿ ಚೀನಾದಿಂದ ಯಾವುದೇ ವಸ್ತು ಖರೀದಿಸಲ್ಲವೆಂದು ಹೇಳುತ್ತಾರೆ. ಪಿಪಿಇ ಕಿಟ್ ಖರೀದಿ ಹೆಸರಿನಲ್ಲಿ 2,000 ಕೋಟಿ ರೂ. ಲೂಟಿ ಮಾಡಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.