ನ್ಯೂಸ್

ಪ್ರಾಸಿಕ್ಯೂಷನ್​ಗೆ ಆದೇಶ ಬೆನ್ನಲ್ಲೇ ಶಾಸಕಾಂಗ ಸಭೆ ಕರೆದ ಸಿಎಂ; ಎಲ್ಲಿ, ಯಾವಾಗ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ-ಜೆಡಿಎಸ್​ ನಾಯಕರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿರುವ ನಡುವೆಯೇ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಗುರುವಾರ (ಆಗಸ್ಟ್​ 22) ಸಭೆ ಕರೆಯಲಾಗಿದ್ದು, ’ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ರಾಜ್ಯಪಾಲರ ವಿರುದ್ಧ ಶಾಸಕಾಂಗ ಸಭೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಜತೆಗೆ ಮುಂದಿನ ಹೋರಾಟಗಳಿಗೆ ಶಾಸಕರ ಸಹಕಾರ ಕೋರಲಿದ್ದಾರೆ ಎಂದು ವರದಿಯಾಗಿದೆ.

ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಹೇಳಿದ್ದನ್ನೇ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ರಾಜ್ಯಪಾಲರೇ ರಾಜೀನಾಮೆ ನೀಡಲಿ ಎಂದು ಸಿಎಂ ಮುಗಿಬಿದ್ದಿದ್ದರು.

ರಾಜ್ಯಪಾಲರ ಈ ನಿರ್ಧಾರ ಸಿಎಂಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದ್ದು, ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಬಹುದು ಎಂಬ ವಿಚಾರ ತೀವ್ರ ಕುತೂಹಲ ಮೂಡಿಸಿದ್ದು, ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪನವರಿಗೆ ಎದುರಾದ ಪರಿಸ್ಥಿತಿ ಸಿದ್ದರಾಮಯ್ಯಗೆ ಬರುತ್ತದಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.