ನ್ಯೂಸ್

ಸಂಡೂರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆ: CM ಸಿದ್ದರಾಮಯ್ಯ ಭರವಸೆ

ಬೆಂಗಳೂರು: ನೂತನ ಕೌಶಲ್ಯ ವಿಶ್ವವಿದ್ಯಾಲಯವನ್ನು ಸಂಡೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ” ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಇಂದು ಒಂದು ವಿಶಿಷ್ಟ ಜನಸಂಖ್ಯೆಯ ಹೊರಳು ಹಾದಿಯಲ್ಲಿದೆ.ನಮ್ಮ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ವಯೋಮಾನದೊಳಗಿದ್ದಾರೆ. ಮುಂದಿನ ದಶಕದಲ್ಲಿ ಸುಮಾರು 1.2 ಕೋಟಿ ಯುವಕರು ಕಾರ್ಯಪಡೆಯನ್ನು ಪ್ರವೇಶಿಸುತ್ತಾರೆ. ಈ ಯುವಪೀಳಿಗೆಯನ್ನು ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸಿದರೆ ಇದು ಅಸಾಧಾರಣ ಅವಕಾಶ. ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ ಈಗ ಭಾರತದ ಕೌಶಲ್ಯ ರಾಜಧಾನಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಜಾಗತಿಕ ಮಟ್ಟಕ್ಕೆ ಕಾರ್ಮಿಕ ಶಕ್ತಿ

ಜಾಗತಿಕ ಮಟ್ಟಕ್ಕೆ ಕಾರ್ಮಿಕ ಶಕ್ತಿಯನ್ನು ಸಿದ್ಧಪಡಿಸಲು ಕರ್ನಾಟಕ ಸ್ಕಿಲ್ ಒಲಂಪಿಕ್ಸ್ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕೌಶಲ್ಯ ಸ್ಪರ್ಧೆಯಲ್ಲಿ 48 ಪದಕಗಳನ್ನು ಪಡೆದು ಭಾರತದಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ ಹಾಗೂ 4 ಅಂತರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಐಟಿಐಗಳು ಹಾಗೂ ಜಿಟಿಟಿಸಿಗಳ ಮೂಲಕ ಸುಮಾರು 33,212 ಯುವಕರಿಗೆ ತರಬೇತಿಯನ್ನು ನೀಡಲಾಗಿದ್ದು,. ಶಾಲಾ ಮಕ್ಕಳಿಗೆ ‘ನನ್ನ ವೃತ್ತಿ , ನನ್ನ ಆಯ್ಕೆ’ ಕಾರ್ಯಕ್ರಮದಡಿ, 35000 ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ವರ್ಷ,ಯೋಜನೆಯನ್ನು 500 ಶಾಲೆಗಳಿಗೆ ವಿಸ್ತರಿಸಿ 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯಿದೆ ಎಂದರು.

ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವ ಗುರಿ

ಬೆಂಗಳೂರು ಕೌಶಲ್ಯ ಶೃಂಗಸಭೆ ಕರ್ನಾಟಕದ ಕೌಶಲ್ಯ ಪಯಣದಲ್ಲಿ ಒಂದು ಮೈಲಿಗಲ್ಲು. ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಇಎಸ್ ಡಿಎಂಎಐ/ಎಂಎಲ್ ಏರೋಸ್ಪೇಸ್, ಹಸಿರು ಇಂಧನ, ಒಳಗೊಳ್ಳುವಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ತಯಾರಾಗಿರುವ ಕಾರ್ಮಿಕಪಡೆಯನ್ನು ಸಿದ್ದಮಾಡುವತ್ತ ಗಮನವನ್ನು ಕೇಂದ್ರೀಕೃತಗೊಳಿಸಿದೆ ಎಂದರು.

ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯದ ಗುರಿ

2032ರ ಹೊತ್ತಿಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಈ ಗುರಿಯನ್ನು ಸಾಧಿಸಲು ನಮಗಿರುವ ಪ್ರಬಲ ಅಸ್ತ್ರವೆಂದರೆ ನಮ್ಮ ಜನ - ಕೌಶಲ್ಯಭರಿತ, ಭವಿಷ್ಯಕ್ಕೆ ತಯಾರಾದ ಹಾಗೂ ನಾವೀನ್ಯತೆವುಳ್ಳ ಕಾರ್ಮಿಕಶಕ್ತಿ ಎಂದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 34 ಮೆಗಾ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡಿದ್ದು 1.43 ಲಕ್ಷ ಉದ್ಯೋಕಾಂಕ್ಷಿಗಳು ಭಾಗವಹಿಸಿದ್ದಾರೆ. 27, 123 ಜನರಿಗೆ ಉದ್ಯೋಗಾವಕಾಶಗಳು ಲಭಿಸಿವೆ. ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಗೆ ತಕ್ಕಂತೆ ರಾಜ್ಯದ ಕೌಶಲ್ಯ ದೃಷ್ಟಿಯನ್ನು ಪರಿವರ್ತಿಸಲಾಗಿದೆ ಎಂದು ತಿಳಿಸಿದರು.