ನ್ಯೂಸ್

ನೆಟೆ ರೋಗದಿಂದ ತೊಗರಿ ಬೆಳೆಗೆ ಹಾನಿ; ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ಸಿಎಂ ಭರವಸೆ

ಕಲಬುರಗಿ: ಕಲಬುರಗಿ ಮತ್ತು ಬೀದರ್​ ಜಿಲ್ಲೆಯಲ್ಲಿ ಸುಮಾರು‌ 2 ಲಕ್ಷ ಹೆಕ್ಟೇರ್​ಗೂ ಹೆಚ್ಚು ಪ್ರಮಾಣದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು, ಇಂದು ಸಂಜೆ (ಮಂಗಳವಾರ) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲೆಯ ಅಫಜಲಪೂರ ತಾಲೂಕಿನ ಗಾಣಗಾಪೂರನಲ್ಲಿ ವಿಠ್ಠಲ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ‌ ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ತೊಗರಿ ಬೆಳೆಗೆ ಪರಿಹಾರ ನೀಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರ ಒತ್ತಾಯಿಸಿದ್ದು, ಎಷ್ಟು ಪರಿಹಾರ ನೀಡಬೇಕು ಎಂಬುದರ ಕುರಿತು ಮಂಗಳವಾರ ಸಂಜೆ ಕೃಷಿ, ಹಣಕಾಸು ಹಾಗೂ ಇತರೆ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರದ ಮೊತ್ತ ನಿರ್ಧರಿಸಲಾಗುವುದು ಎಂದರು.

ಇದೇ ವೇಳೆ ಭೆಂಗಳೂರಿನ ಯಲಹಂಕಾದಲ್ಲಿ ಫೆಬ್ರವರಿ 13 ರಿಂದ 17ರ ವರೆಗೆ ನಡೆಯುವ ಏರೋ ಇಂಡಿಯಾ ಏರ್ ಶೋ ಪೂರ್ವ ಸಿದ್ದತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಇಲ್ಲಿಂದಲೇ ವಿಡಿಯೋ ಕಾನ್ಪರೆನ್ಸ್​​ನಲ್ಲಿ ಭಾಗವಹಿಸಿದ್ದೇ‌ನೆ. ಈ ಬಾರಿ ಅತಿದೊಡ್ಡ ಏರ್ ಶೋ ಮತ್ತು ಏರ್ ಸ್ಪೇಷ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ‌ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸ್ಪೇಸ್ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. 1996 ರಿಂದಲೂ ಕರ್ನಾಟಕ ಏರ್ ಶೋಗೆ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯವಾಗಿದೆ ಎಂದರು.