ಪಶ್ಚಿಮಬಂಗಾಳ: ದುರ್ಗಾ ಪೂಜೆ ಮಾಡುವ ಸಮಿತಿಯವರಿಗೆ ಸರ್ಕಾರದ ಕಡೆಯಿಂದ 60 ಸಾವಿರ ರೂ. ಧನಸಹಾಯ ನೀಡುವುದಾಗಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಈ ಭಾರಿ ಧನಸಹಾಯವನ್ನು ಅವರು ಸೋಮವಾರ ಘೋಷಣೆ ಮಾಡಿದ್ದಾರೆ.
ಮಾತ್ರವಲ್ಲ, ದುರ್ಗಾ ಪೂಜೆ ಸಲುವಾಗಿ ಸೆ. 30ರಿಂದ ಅ. 10ರ ವರೆಗೆ ಅವರು ಸರ್ಕಾರಿ ರಜೆಯನ್ನು ಕೂಡ ಘೋಷಣೆ ಮಾಡಿದ್ದಾರೆ. ಜತೆಗೆ ದುರ್ಗಾ ಪೂಜೆಗೆ ಬಳಕೆ ಆಗುವ ವಿದ್ಯುತ್ ಬಿಲ್ನಲ್ಲೂ ಶೇ. 60 ರಿಯಾಯಿತಿ ಕೂಡ ಕೊಡುವುದಾಗಿ ಹೇಳಿದ್ದಾರೆ. ಈ ಹಿಂದೆ ಶೇ. 50 ರಿಯಾಯಿತಿ ನೀಡಲಾಗುತ್ತಿದ್ದು, ಅದನ್ನು ಈ ಸಲ ಶೇ. 60ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ವಿಜೃಂಭಣೆಯಿಂದ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರ 2018ರಿಂದ ದುರ್ಗಾ ಪೂಜಾ ಸಮಿತಿಗಳಿಗೆ ಧನಸಹಾಯ ನೀಡುತ್ತ ಬಂದಿದೆ. ಇದುವರೆಗೆ ಈ ಧನಸಹಾಯ ಪ್ರತಿ ಸಮಿತಿಗೆ 50 ಸಾವಿರ ರೂ. ಇದ್ದಿದ್ದು, ಅದನ್ನು 60 ಸಾವಿರ ರೂಪಾಯಿಗೆ ಹೆಚ್ಚಿಸಿದ್ದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.