ನ್ಯೂಸ್

ರಾಜೀನಾಮೆ ಕೇಳಿಯೇ ಇಲ್ಲ ಎಂದು ಸುಳ್ಳು ಹೇಳಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಿಎಂ ಪ್ರಯತ್ನ: ಆರ್​. ಅಶೋಕ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜಿನಾಮೆಯನ್ನು ನಾವು ಕೇಳಿಲ್ಲ. ಪ್ರಕರಣದ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ವರದಿ ಪಡೆದು ನಂತರ ತೀರ್ಮಾನಿಸಲಾಗುವುದು. ಬೆಂಗಳೂರಿನಲ್ಲಿ ಒಳ್ಳೆ ಮಳೆಯಾಗಿದ್ದು, ಮಳೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಮಳೆ ಹೆಚ್ಚಾದಾಗ ಸಮಸ್ಯೆಗಳು ಉಂಟಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದೆ.

"ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಚುನಾವಣೋತ್ತರ ಸಮೀಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ನಾವು ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ, ಇದು ವಾಸ್ತವ. ಆದರೆ ಸಮೀಕ್ಷಾ ವರದಿ ಇದಕ್ಕೆ ವ್ಯತಿರಿಕ್ತವಾಗಿದೆ. ಈ ಸಮೀಕ್ಷೆಯನ್ನು ನಾವು ಸಂಪೂರ್ಣ ತಳ್ಳಿಹಾಕುತ್ತೇವೆ" ಎಂದು ಸಿಎಂ ಹೇಳಿದರು.

ಇನ್ನು ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್​. ಅಶೋಕ, "ಸಚಿವ ಬಿ. ನಾಗೇಂದ್ರ ಮಾಡುತ್ತಿರುವ ಬ್ಲಾಕ್ ಮೇಲ್​ನಿಂದ ಮುಜುಗುರಕ್ಕೆ ಒಳಗಾಗಿರುವ ಸಿಎಂ ಸಿದ್ದರಾಮಯ್ಯ, ರಾಜೀನಾಮೆ ಕೇಳಿಯೇ ಇಲ್ಲ ಎಂದು ಸುಳ್ಳು ಹೇಳಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿಮ್ಮ ಸಂಪುಟದ ಸದಸ್ಯರನ್ನು ಮೊದಲಿನಿಂದಲೂ ಕಂಟ್ರೋಲ್​ನಲ್ಲಿ ಇಟ್ಟಿದ್ದಿದ್ದರೆ, ಈಗ ನಿಮ್ಮ ಸ್ವಾಭಿಮಾನ, ಘನತೆ, ಗೌರವ ಎಲ್ಲವನ್ನೂ ಪಣಕ್ಕಿಟ್ಟು ಡ್ಯಾಮೇಜ್ ಕಂಟ್ರೋಲ್ ಮಾಡುವ ದುಸ್ಥಿತಿ ಬರುತ್ತಿರಲಿಲ್ಲ" ಎಂದರು.

"ಒಬ್ಬ ಸಚಿವನ ರಾಜೀನಾಮೆ ಕೂಡ ಪಡೆಯಲಾಗದಷ್ಟು ದುರ್ಬಲ ಮುಖ್ಯಮಂತ್ರಿಯಾಗಿ ಮುಂದುವರೆಯುವ ಬದಲು ರಾಜಾರೋಷವಾಗಿ ರಾಜೀನಾಮೆ ಕೊಟ್ಟು ನಿವೃತ್ತರಾಗುವುದೇ ಲೇಸು ಸಿದ್ದರಾಮಯ್ಯನವರೇ" ಎಂದು ವ್ಯಂಗ್ಯವಾಡಿದ್ದಾರೆ.