ನ್ಯೂಸ್

ಸಿಎಂ ಭಾವಿ ಮನೆ ಭರ್ಜರಿ ನವೀಕರಣ; ಆರ್ಥಿಕ ಮಿತವ್ಯಯ ಮಧ್ಯೆ ಲಕ್ಷಾಂತರ ರೂಪಾಯಿ ವೆಚ್ಚ

ಬೆಂಗಳೂರು: ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಆರ್ಥಿಕ ಮಿತ ವ್ಯಯ ಸಾಧಿಸಲೇಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದ್ದರೆ, ಇತ್ತ ಸಿಎಂ ವಾಸಿಸಲಿರುವ ಅಧಿಕೃತ ವಸತಿ ಗೃಹಕ್ಕೆ ಭರ್ಜರಿ ವೆಚ್ಚ ಮಾಡಿ ಹೊಸತನದ ಸ್ಪರ್ಶ ನೀಡಲಾಗುತ್ತಿದೆ. ಆರ್.ಟಿ.ನಗರದ ಸ್ವಂತ ಮನೆಯಿಂದ ಈ ಹಿಂದೆ ಡಾ.ಸಿ.ಎನ್.ಅಶ್ವತ್ಥನಾರಾಯಣ ವಾಸವಿದ್ದ ರೇಸ್ ಕೋರ್ಸ್ ರಸ್ತೆಯಲ್ಲಿನ ವಸತಿ ಗೃಹ ಬೊಮ್ಮಾಯಿಗೆ ಹಂಚಿಕೆಯಾಗಿದ್ದು, ಆ ಮನೆಯನ್ನೀಗ ನವೀಕರಣ ಮಾಡಲಾಗುತ್ತಿದೆ. ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರ ಬೊಮ್ಮಾಯಿ ಈ ವಸತಿಗೃಹಕ್ಕೆ ಪ್ರವೇಶ ಮಾಡುವ ಸಾಧ್ಯತೆಯಿದ್ದು, ನವೀಕರಣ ಕಾಮಗಾರಿ ಭರದಿಂದ ಸಾಗಿದೆ.

ಕರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟ ನಿರ್ವಹಿಸಲು ಶೇ.5 ಆರ್ಥಿಕ ಮಿತವ್ಯಯದ ಗುರಿ ಹೊಂದಿರುವ ಬೊಮ್ಮಾಯಿ, ಜೀರೋ ಟ್ರಾಫಿಕ್ ಬೇಡವೆನ್ನುವ ಮೂಲಕ ಸರಳ ಸಿಎಂ ಎನ್ನುವ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಆದರೆ ವಾಸವಿರಲಿರುವ ಸರ್ಕಾರಿ ಗೃಹವನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನವೀಕರಣ ಮಾಡುತ್ತಿರುವುದು ಗಮನಾರ್ಹ. ಅಷ್ಟಕ್ಕೂ ಬೊಮ್ಮಾಯಿ ಅವರ ಮುಖ್ಯಮಂತ್ರಿ ಪದಾವಧಿ ಉಳಿದಿರುವುದು ಒಂದು ಮುಕ್ಕಾಲು ವರ್ಷ ಮಾತ್ರ.