ನ್ಯೂಸ್

ಜನಪ್ರಿಯ ಯೋಜನೆ ಹೆಚ್ಚುವರಿ ಹೊರೆ: 3574 ಕೋಟಿ ರೂ. ಪೂರಕ ಅಂದಾಜು ಮಂಡನೆ; ಬೇಡಿಕೆಗಳ ಪ್ರಸ್ತಾವನೆ ವಿವರಿಸಿದ ಸಿಎಂ..

Webdesk - Ravikanth

ಬೆಳಗಾವಿ: ಪ್ರಕೃತಿ ವಿಕೋಪ, ಕರೊನಾ ಪರಿಹಾರ ಕಾರ್ಯ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ, ರೈತ ಉತ್ಪಾದಕ ಕಂಪನಿಗಳಿಗೆ ಅಮೃತ ಯೋಜನೆ ಮತ್ತಿತರ ‘ಜನಪ್ರಿಯ’ ಕಾರ್ಯಕ್ರಮಗಳ ವೆಚ್ಚ ಭರಿಸಲು ರಾಜ್ಯದ ಬೊಕ್ಕಸಕ್ಕೆ 3,574.67 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬಿದ್ದಿದೆ. ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪೂರಕ ಅಂದಾಜುಗಳ ಎರಡನೇ ಕಂತಿನ ಪ್ರಸ್ತಾವನೆ ಮಂಡಿಸಲಾಯಿತು. ಪ್ರಸಕ್ತ ಆರ್ಥಿಕ ವರ್ಷಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ 2.46 ಲಕ್ಷ ಕೋಟಿ ರೂ. ಬಜೆಟ್​ಗೆ ಪೂರಕವಾಗಿ ಸಿಎಂ ಬಸವರಾಜ ಬೊಮ್ಮಾಯಿ 3574.67 ಕೋಟಿ ರೂ.ಗಳ ವೆಚ್ಚದ ಪೂರಕ ಅಂದಾಜು ಮಂಡಿಸಿ, ಬೇಡಿಕೆಗಳನ್ನು ವಿವರಿಸಿದ್ದಾರೆ.

ಪೂರಕ ಅಂದಾಜಿನ ಪೈಕಿ 84.68 ಕೋಟಿ ರೂ. ಪ್ರಭೃತ ವೆಚ್ಚ ಮತ್ತು 3489 ಕೋಟಿ ರೂ. ವೆಚ್ಚ ಸೇರಿದೆ. 156.08 ಕೋಟಿ ರೂ. ಸಂಚಿತ ನಿಧಿ ಠೇವಣಿಯಿಂದ ಭರಿಸಲಾಗುತ್ತಿದೆ. ಜುಲೈ-ಆಗಸ್ಟ್ ಮಳೆಯಿಂದ ಹಾನಿಯಾದ ಮನೆಗಳ ಪರಿಹಾರಕ್ಕೆ 352 ಕೋಟಿ ರೂ. ಹಾಗೂ ಕರೊನಾ ಪರಿಹಾರ ಕಾರ್ಯಕ್ಕೆ 224 ಕೋಟಿ ರೂ. ಸೇರಿ 577 ಕೋಟಿ ರೂ. ವೆಚ್ಚಕ್ಕೆ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ರೈತ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ನೀಡುವ ಹೊಸ ಯೋಜನೆಗೆ 200 ಕೋಟಿ ರೂ., ಅಮೃತ ರೈತ ಉತ್ಪಾದಕ ಸಂಸ್ಥೆಗಳ ರಚನೆ ಯೋಜನೆ ಅನುಷ್ಠಾನಕ್ಕೆ 3.5 ಕೋಟಿ ರೂ., ಮಹಿಳಾ ಸ್ವಸಹಾಯ ಗುಂಪುಗಳಿಗೆ ಅಮೃತ ಯೋಜನೆಯಡಿ ಬೀಜ ಧನ ನೀಡಲೆಂದು 75 ಕೋಟಿ ರೂ. ಮೀಸಲಿಡಲಾಗಿದೆ. 2021-22ನೇ ಸಾಲಿಗೆ ಮತದಾರ ಗುರುತಿನ ಚೀಟಿ ಸ್ಪೀಡ್ ಪೋಸ್ಟ್ ಮಾಡಲು 4.25 ಕೋಟಿ ರೂ., ಮಹಾದಾಯಿ ಕ್ಲೇಮ್ ಕಮೀಷನರ್ ಕಚೇರಿ ಮೂಲಸೌಕರ್ಯಕ್ಕೆ 33.87 ಲಕ್ಷ ರೂ., ಡಿಜೆಹಳ್ಳಿ-ಕೆಜಿ ಹಳ್ಳಿ ಕ್ಲೇಮ್ ಕಮೀಷನ್ ಕಚೇರಿ ವೆಚ್ಚಕ್ಕೆ 50 ಲಕ್ಷ ರೂ. ಸೇರಿ 83.87 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ.

ಹೆಚ್ಚುವರಿ ವೆಚ್ಚಗಳ ಮುಖ್ಯಾಂಶಗಳು

  • ಸ್ಮಾರ್ಟ್ ಸಿಟಿ ಯೋಜನಾ ವೆಚ್ಚದಲ್ಲಿ ರಾಜ್ಯದ ಪಾಲು 278.12 ಕೋಟಿ ರೂ.
  • ಮುಖ್ಯಮಂತ್ರಿ ನೇತೃತ್ವದ ನಿಯೋಗ ದಾವೋಸ್ ಆರ್ಥಿಕ ಶೃಂಗದಲ್ಲಿ ಪಾಲ್ಗೊಳ್ಳಲು 4 ಕೋಟಿ ರೂ.
  • ಸಾರಿಗೆ ನಿಗಮಗಳಿಗೆ ಸಹಾಯಧನ-101.98 ಕೋಟಿ ರೂ.
  • ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ವೆಚ್ಚ ಭರಿಸಲು 33.21 ಕೋಟಿ ರೂ.
  • ಸರ್ಕಾರಿ ವೈದ್ಯಕೀಯ ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿ ವೇತನ ಮತ್ತು ಕರೊನಾ ರಿಸ್ಕ್ ಭತ್ಯೆ, ಚಿಕ್ಕಬಳ್ಳಾಪುರ ವೈದ್ಯಕೀಯ ಆಸ್ಪತ್ರೆ ಕಾಲೇಜು ಕಟ್ಟಡ ವೆಚ್ಚ217.29 ಕೋಟಿ ರೂ.

ವಿಜಯನಗರ ಜಿಲ್ಲೆಗೆ 134 ಕೋಟಿ ರೂ. ನಿಗದಿ: ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯಲ್ಲಿ ಪ್ರಾರಂಭಿಸುವ ವಿವಿಧ ಇಲಾಖಾ ಕಚೇರಿಗಳ ಪೀಠೋಪಕರಣಗಳ ಖರೀದಿಗೆ 8.49 ಕೋಟಿ ರೂ., ಜಿಲ್ಲಾಡಳಿತ ಭವನ, ಇತರ ಕಚೇರಿ, ವಸತಿ ಗೃಹಗಳ ನಿರ್ವಣಕ್ಕೆ 83.90 ಕೋಟಿ ರೂ., ಇಲಾಖೆ ಕಚೇರಿಗಳಿಗೆ ಗುರುತಿಸಿರುವ ಕಟ್ಟಡಗಳ ದುರಸ್ತಿಗೆ 41.69 ಕೋಟಿ ರೂ. ಒಳಗೊಂಡು 134 ಕೋಟಿ ರೂ. ಕಾದಿಡಲಾಗಿದೆ.

ದೇವಸ್ಥಾನಗಳ ಜೀಣೋದ್ಧಾರಕ್ಕೆ 8.66 ಕೋಟಿ ರೂ.: ಮಂಡ್ಯ ಜಿಲ್ಲೆಯ ಭೂವರಹಾನಾಥಸ್ವಾಮಿ ದೇವಸ್ಥಾನ ಕಾಮಗಾರಿಗೆ 3 ಕೋಟಿ ರೂ., ಅರಸಿಕೆರೆ ತಾಲೂಕಿನ ದೇವಾಲಯಗಳ ಜೀಣೋದ್ಧಾರಕ್ಕೆ 66 ಲಕ್ಷ ರೂ. ಹತ್ಯಾಳು ನರಸಿಂಹಸ್ವಾಮಿ ಬೆಟ್ಟ ದೇವಸ್ಥಾನ ಅಭಿವೃದ್ಧಿಗೆ 1 ಕೋಟಿ ರೂ., ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಸಮುದಾಯ ಭವನ ನಿರ್ವಣಕ್ಕೆ 1.5 ಕೋಟಿ ರೂ. ಹೊಸದುರ್ಗದಲ್ಲಿ ಕನಕದಾಸರ ಏಕಶಿಲಾ ವಿಗ್ರಹಕ್ಕೆ 2.5 ಕೋಟಿ ರೂ. ಸೇರಿ ಒಟ್ಟು 8.66 ಕೋಟಿ ರೂ. ಮೀಸಲಿಡಲಾಗಿದೆ.

2362 ಕೋಟಿ ರೂ. ರಕ್ಷಿಸಲು ಕಾಯ್ದೆ: ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕವನ್ನು ಸರ್ಕಾರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿತು. ಬಿಬಿಎಂಪಿ ಸಂಗ್ರಹಿಸಿದ ವಿವಿಧ ಶುಲ್ಕವನ್ನು ವಿವಿಧ ಅಭಿವೖದ್ಧಿ ಕೆಲಸಗಳಿಗೆ ಉಪಯೋಗಿಸಿಕೊಂಡಿದೆ. ಅದನ್ನು ಮರುಪಾವತಿಸಲು 2,362 ಕೋಟಿ ರೂ. ಆರ್ಥಿಕ ಹೊರೆ ಉಂಟಾಗುವುದು. ಹೀಗಾಗಿ ಬಿಬಿಎಂಪಿಯು ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ಪ್ರಾರಂಭ ಪ್ರಮಾಣ ಪತ್ರ, ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ಮಂಜೂರು ಸಮಯದಲ್ಲಿ ಸಂಗ್ರಹಿಸಲಾದ ಶುಲ್ಕ ಮತ್ತು ದಂಡಗಳನ್ನು ಸಿಂಧುಗೊಳಿಸಲು ಹಾಗೂ ಕೇಂದ್ರ- ರಾಜ್ಯ ಸರ್ಕಾರದ ಮಾಲೀಕತ್ವ ಇರುವ/ ನಿಯಂತ್ರಣದಲ್ಲಿರುವ ಮಂಡಳಿ/ ನಿಗಮ/ ಸಂಸ್ಥೆಗೆ ಇಂಥ ಶುಲ್ಕದ ಪಾವತಿಯಿಂದ ವಿನಾಯಿತಿ ನೀಡಿದೆ.

500 ಕೈಗಾರಿಕೆ ನಿವೇಶನ ವಾಪಸ್: ಕೈಗಾರಿಕೆ ಸ್ಥಾಪಿಸಲು ಭೂಮಿ ಪಡೆದು 5ರಿಂದ 20 ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭ ಮಾಡದವರಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೆ 500ಕ್ಕೂ ಹೆಚ್ಚು ಕೈಗಾರಿಕಾ ನಿವೇಶನ ವಾಪಸ್ ಪಡೆಯಲಾಗಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಯಲ್ಲಿ ಹೇಳಿದರು.

ಬೇಡಿಕೆಗಳ ಅಧ್ಯಯನಕ್ಕಾಗಿ ಸಮಿತಿ: ಅತಿಥಿ ಉಪನ್ಯಾಸಕರ ಸೇವೆ ಕಾಯಂ, ವರ್ಷದ ಎಲ್ಲ ತಿಂಗಳು ವೇತನ ಪಾವತಿ ಬೇಡಿಕೆಗಳ ಅಧ್ಯಯನ ನಡೆಸಿ ವರದಿ ಸಲ್ಲಿಸಲೆಂದು ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿಧಾನಸಭೆಗೆ ತಿಳಿಸಿದರು.

ಕೃಷಿ ವಿವಿ ವಿಧೇಯಕ ಮಂಡನೆ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ 2021ರನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಲಿಸಲಾಯಿತು. ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ- ಶಿವಮೊಗ್ಗ ಹೊಸ ಕ್ಯಾಂಪಸ್ ಅನ್ನು ಸಾಗರ ತಾಲೂಕಿನ ಇರುವಕ್ಕಿಯಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕದ ಕೆಲವು ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಅಧಿನಿಯಮ ಅಂಗ್ಲ ಭಾಷಾ ಅಧಿನಿಯಮದಲ್ಲಿ ‘ಶಿಮೊಗ’ ಎಂದು ಮುದ್ರಿಸಲಾಗಿದೆ. ಇದನ್ನು ‘ಶಿವಮೊಗ್ಗ’ ಎಂದು ಓದಿಕೊಳ್ಳುವಂತೆ ಹೇಳಿದೆ.

ಖಾಸಗಿ ನಿರ್ಣಯ ಮಂಡನೆ: ದೇಸಿ ಪರಂಪರೆಯ ಆಯುರ್ವೆದ ವೈದ್ಯ ಪದ್ದತಿಗೆ ಮನ್ನಣೆ ದೊರಕಿಸಿ, ಆಯುರ್ವೆದ ವೈದ್ಯ ಪದ್ದತಿಗೆ ಪೂರಕವಾದ ನೀತಿ ರೂಪಿಸುವ ಕುರಿತು ಕಾಂಗ್ರೆಸ್​ನ ಯು.ಬಿ.ವೆಂಕಟೇಶ ಪರಿಷತ್​ನಲ್ಲಿ ಖಾಸಗಿ ನಿರ್ಣಯ ಮಂಡಿಸಿದರು.