ನ್ಯೂಸ್

Chandrababu naidu: 'ಹೆಚ್ಚು ಮಕ್ಕಳನ್ನು ಹೆರಬೇಕು,': ಸಿಎಂ ಚಂದ್ರಬಾಬು ನಾಯ್ಡು ಸಲಹೆ

ವಿಜಯವಾಡ: ದಕ್ಷಿಣ ಭಾರತದ ರಾಜ್ಯಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನೂ ಹೋಗಲಾಡಿಸಲು ಜನರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು(Chandrababu naidu) ಸಲಹೆ ನೀಡಿದ್ದಾರೆ.

ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಬ್ಬ ಪುತ್ರ ಅಥವಾ ಪುತ್ರಿ ಇದ್ದು, ಅವರು ಉದ್ಯೋಗ ಅರಸಿ ದೂರದ ನಗರಗಳಿಗೆ ತೆರಳಿದರೆ ಆಸ್ತಿ, ಮನೆಯನ್ನು ವೃದ್ಧರು ನೋಡಿಕೊಳ್ಳಬೇಕಾಗುತ್ತದೆ. ಕಡೆಗೆ ಅವರನ್ನು ನೋಡಿಕೊಳ್ಳುವವರು ಸಹ ಯಾರೂ ಇರುವುದಿಲ್ಲ. ಹೀಗಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಪ್ರೋತ್ಸಾಹಧನ ನೀಡಲು ತಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಈ ನಿಟ್ಟಿನಲ್ಲಿ ಹೊಸ ಕಾನೂನು ತರಲು ಸಿದ್ಧತೆಯೂ ನಡೆದಿದೆ. ಈ ಕಾನೂನು ಬಂದರೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ವಿವರಿಸಿದರು.

ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಸರ್ಕಾರವು ಪರಿಗಣಿಸುತ್ತಿದೆ. ಹಿಂದಿನ ಕಾನೂನಿನ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಕಾನೂನನ್ನು ರದ್ದುಗೊಳಿಸಿದೆ. ಅದರ ಜಾಗದಲ್ಲಿ ಹೊಸ ಕಾನೂನು ತರಲು ಚಿಂತನೆ ನಡೆಯುತ್ತಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಚೀನಾ, ಜಪಾನ್ ಸೇರಿದಂತೆ ಯುರೋಪ್ ನ ಹಲವು ರಾಷ್ಟ್ರಗಳು ವೃದ್ಧಾಪ್ಯದ ಸಮಸ್ಯೆಯನ್ನು ಎದುರಿಸುತ್ತಿವೆ. ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದಲ್ಲಿ ವೃದ್ಧಾಪ್ಯದ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದೆ. ಯುವಕರ ವಲಸೆಯಿಂದ ಸಮಸ್ಯೆ ಬಿಗಡಾಯಿಸಿದೆ ಎಂದರು.

ಯುವಕರು ನಗರಗಳಿಗೆ ತೆರಳುವುದರಿಂದ ಆಂಧ್ರಪ್ರದೇಶದ ಹಲವು ಗ್ರಾಮಗಳಲ್ಲಿ ವೃದ್ಧರು ಮಾತ್ರ ಉಳಿದಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಜನನ ಪ್ರಮಾಣ 1.6 ರಷ್ಟಿದ್ದು, ರಾಷ್ಟ್ರೀಯ ಸರಾಸರಿ 2.1 ಕ್ಕಿಂತ ಕಡಿಮೆಯಾಗಿದೆ ಎಂದು ನಾಯ್ಡು ಹೇಳಿದರು.