ನ್ಯೂಸ್

ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ... ಸಿಎಂ ಹೇಳಿಕೆ ಬೆನ್ನಲ್ಲೇ ಸಚಿವರು- ಆಕಾಂಕ್ಷಿಗಳಿಗೆ ಟೆನ್ಷನ್!

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ನೋಡೋಣ. ಏನೆಂಬುದು ಇಂದೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 'ಅಡ್ಡಗೋಡೆ ಮೇಲೆ ದೀಪ' ಇಟ್ಟಂತೆ ಹೇಳಿದ್ದಾರೆ. ಆ ಮೂಲಕ ಸಚಿವರು ಹಾಗೂ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಿಸಿದ್ದಾರೆ.

ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ‌ 54ನೇ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಬಳಿ ಅವರ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಆಹ್ವಾನಿಸಿದ್ದು, ಅವರ ಅನುಕೂಲತೆ ನೋಡಿಕೊಂಡು ದಿನಾಂಕ ಹಾಗೂ ಸಮಯ‌ ನಿಗದಿ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿರಿ ಶಾಸಕ ಮನಗೂಳಿ ಏರ್​ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲು

ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಅನ್ನೋ ಟೆನ್ಷನ್​ನಲ್ಲಿ ಸಚಿವರಿಗೆ ಶುರುವಾಗಿದೆ. ಸದ್ಯ ಸಂಪುಟದಲ್ಲಿ ಖಾಲಿ ಇರುವುದೇ ಏಳು ಸ್ಥಾನ. ಏಳು ಶಾಸಕರಿಗೆ ಅವಕಾಶ ಕೊಟ್ರೆ ಒಂದು ಸ್ಥಾನವೂ ಖಾಲಿ ಇರುವುದಿಲ್ಲ. ಯಾವುದೇ ಸರ್ಕಾರದಲ್ಲಿ ಯಾರೇ ಮುಖ್ಯಮಂತ್ರಿ ಇದ್ದರೂ ಒಂದೆರಡು ಸ್ಥಾನ ಖಾಲಿ ಉಳಿಸಿಕೊಳ್ಳುತ್ತಾರೆ. ಅಸಮಾಧಾನಿತರನ್ನ ಸಮಾಧಾನ ಮಾಡಲು ಖಾಲಿ ಇಟ್ಕೊಂಡಿರುತ್ತಾರೆ. ಹೀಗಾಗಿ ಸಿಎಂ ಏಳು ಸ್ಥಾನ ತುಂಬುತ್ತೇವೆ ಅಂತ ಹೇಳಿರುವುದು ಹಾಲಿ ಸಚಿವರ ಟೆನ್ಷನ್​ಗೆ ಕಾರಣ ಎನ್ನಲಾಗಿದೆ.

ಲಾಲ್ ಬಹಾದೂರ್ ಶಾಸ್ತ್ರಿ ಸ್ಮರಣೆ: ಇದಕ್ಕೂ ಮುನ್ನ ಲಾಲ್ ಬಹಾದೂರ್ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ನೆಹರೂ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿ, ಪ್ರಧಾನಿಯೂ ಆದ ಅಸಾಧಾರಣ ವ್ಯಕ್ತಿ. ಶಾಸ್ತ್ರೀಜಿ ಅವರ ಜೈಜವಾನ್ ಜೈಕಿಸಾನ್ ಘೋಷಣೆ ಜತೆಗೆ ವಾಜಪೇಯಿ ಅವರ ಜೈವಿಜ್ಞಾನ್ ಮತ್ತು ಪ್ರಧಾನಿ ಮೋದಿ ಅವರ ಜೈಅನುಸಂಧಾನ್ ದೇಶದ ಅಭಿವೃದ್ಧಿಯ ಆಧಾರ ಸ್ತಂಭಗಳಾಗಿವೆ ಎಂದು ಬಿಎಸ್ ವೈ ಕೊಂಡಾಡಿದರು.