ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯ ರಾಜಹಂಸಗಢದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಆರ್.ಐ.ಡಿ.ಎಲ್. ಸಹಯೋಗದೊಂದಿಗೆ ರಾಜಹಂಸಗಡದ ಕೋಟೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಮುಖ್ಯಮಂತ್ರಿಗಳು ಶಿವಾಜಿ ಪ್ರತಿಮೆ ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಬೊಮ್ಮಾಯಿ ಅವರು, ಅಭಿವೃದ್ಧಿಗಾಗಿ 2008ರಲ್ಲೇ ಬಿ.ಎಸ್ ಯಡಿಯೂರಪ್ಪ ಅವರು ಅನುದಾನ ನೀಡಿದ್ದರು. ಶಿವಾಜಿ ಈ ದೇಶ ಕಂಡ ಅಪ್ರತಿಮ ನಾಯಕ. ಹಿಂದೂ ಸಾಮ್ರಾಜ್ಯ ಉಳಿಸಲು ಶಿವಾಜಿ ಮಹಾರಾಜರ ಪಾತ್ರ ದೊಡ್ಡದಾಗಿದೆ. ದೇಶ ಕಾಪಾಡಲು ಮೊಟ್ಟ ಮೊದಲು ಹೋರಾಟ ಮಾಡಿದ್ದು ಶಿವಾಜಿ. ರಾಜಹಂಸಗಡ ಶಿವಾಜಿ ಮಹಾರಾಜರು ಕಟ್ಟಿದ ಕೋಟೆ ಎಂದು ಹೇಳಿದರು.
ನಾಲ್ಕೂವರೆ ಕೋಟಿ ವೆಚ್ಚದಲ್ಲಿ ರಾಜಹಂಸಗಡ ಕೋಟೆ ಅಭಿವೃದ್ಧಿ ಮಾಡಲಾಗಿದ್ದು, ಇದರ ಭಾಗವಾಗಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆಯನ್ನೂ ಸ್ಥಾಪನೆ ಮಾಡಲಾಗಿದೆ.