ಬೆಂಗಳೂರು: ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮುದಾಯದ ಏಳ್ಗೆಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭರವಸೆ ನೀಡಿದ್ದು, ಇದಕ್ಕಾಗಿ ಆರಂಭದಲ್ಲಿ 250 ಕೋಟಿ ರೂ. ನೀಡುವುದಾಗಿ ವಾಗ್ದಾನ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ್, ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಮೇಯರ್ ಶರಣಕುಮಾರ ಮೋದಿ ನೇತೃತ್ವದಲ್ಲಿ ಬುಧವಾರ ಸಿಎಂ ಭೇಟಿ ಮಾಡಿದ ನಿಯೋಗ ನಿಗಮ ಸ್ಥಾಪಿಸಬೇಕು ಮತ್ತು ಆರಂಭದಲ್ಲಿ 500 ಕೋಟಿ ರೂ. ಒದಗಿಸಬೇಕೆಂದು ಮನವಿ ಸಲ್ಲಿಸಿತು.
ವೀರಶೈವ ಲಿಂಗಾಯತ ಸಮುದಾಯದಲ್ಲಿರುವ 86 ಉಪ ಜಾತಿಗಳಲ್ಲಿ ಲಕ್ಷಾಂತರ ಜನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಅವರ ಉನ್ನತಿಗಾಗಿ ಸರ್ಕಾರ ನಿಗಮ ಸ್ಥಾಪಿಸಿ, ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕೆಂದು ಬಿ.ಜಿ. ಪಾಟೀಲ್ ವಿವರಿಸಿ ದರು. ಈ ವಿಷಯವನ್ನು ಕ್ಯಾಬಿನೆಟ್ನಲ್ಲಿಟ್ಟು ಒಪ್ಪಿಗೆ ಪಡೆಯಲಾಗುತ್ತದೆ ಎಂದು ನಿಯೋಗಕ್ಕೆ ಸಿಎಂ ಭರವಸೆ ನೀಡಿದರು.
ಈಗಾಗಲೇ ಎಲ್ಲ ಪಕ್ಷಗಳ ಶಾಸಕರು ನಿಗಮ ಸ್ಥಾಪನೆಗೆ ಮನವಿ ಮಾಡಿದ್ದನ್ನು ಮತ್ತೊಮ್ಮೆನನೆಪಿಸಕೊಡಲಾಯಿತಲ್ಲದೇ ಮಹಾರಾಷ್ಟ್ರ ಮಾದರಿಯಲ್ಲಿ ನಿಗಮ ಆಗಬೇಕೆಂದು ಕೋರಿ, ನಿಗಮ ಸ್ಥಾಪನೆಗೆ ಆ ರಾಜ್ಯ ಅನುಸರಿಸಿದ ನಿಯಮಾವಳಿಗಳ ಪಟ್ಟಿ ನೀಡಲಾಯಿತು. ನಿಯೋಗದಲ್ಲಿ ಶಾಸಕ ಎಂ. ವೈ. ಪಾಟೀಲ್, ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ್, ಪ್ರಮುಖರಾದ ರವಿ ಬಿರಾದಾರ, ಹಣಮಂತರಾವ್ ಮಲಾಜಿ ಇತರರಿದ್ದರು.