ಜೈಪುರ: ರಾಜಸ್ಥಾನ ರಾಜಕೀಯ ಬೆಳವಣಿಗೆ ಬಹಳಷ್ಟು ಕುತೂಹಲ ಕೆರಳಿಸಿದ್ದು, ಸಚಿನ್ ಪೈಲಟ್ ಬಣದ ಅನರ್ಹತೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ನಿರ್ಣಯವಾಗಲು ಇನ್ನೂ ಕೆಲವು ದಿನಗಳಿವೆ. ಏತನ್ಮಧ್ಯೆ ದಿನದ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಬಲ ಪ್ರದರ್ಶನಕ್ಕೆ ಹೊರಟಿದ್ದು, ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನ ತಲುಪಿದ್ದಾರೆ.
ತಮ್ಮ ಜತೆಗಿರುವ ಶಾಸಕರನ್ನು ಪರೇಡ್ ಮಾಡಿಸಿ ತಮಗೆ ಬಹುಮತವಿದೆ ಎಂಬುದನ್ನು ಸಾಬೀತು ಮಾಡಲು ತೆರಳಿದ್ದಾರೆ. ಅಲ್ಲದೆ, ವಿಶ್ವಾಸ ಮತ ಸಾಬೀತುಪಡಿಸಲು ವಿಶೇಷ ಅಧಿವೇಶನಕ್ಕೂ ಅವಕಾಶ ನೀಡುವಂತೆ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಕೋರಿದ್ದಾರೆ. ಈ ಬಗ್ಗೆ ರಾಜ್ಯಪಾಲರು ಇನ್ನೂ ತೀರ್ಮಾನ ಪ್ರಕಟಿಸಿಲ್ಲ.
ಇದಕ್ಕೂ ಮುನ್ನ ಜೈಪುರದ ಹೋಟೆಲ್ ಫೇರ್ಮೋಂಟ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಹಿರಿಯ ನಾಯಕ ಅಜೆಯ್ ಮಾಕೆನ್ ಜತೆಗಿದ್ದರು. ಈ ಸಭೆಯ ಬಳಿಕ ರಾಜ್ಯಪಾಲರ ಬಳಿಗೆ ತೆರಳುವ ನಿರ್ಧಾರವನ್ನು ಅವರು ಪ್ರಕಟಿಸಿದರು. ಅಲ್ಲದೆ, ವಿಧಾನಸಭೆ ಅಧಿವೇಶನ ನಡೆಸುವುದಕ್ಕೆ ಅನುಮತಿ ನೀಡದೇ ಹೋದರೆ ದೇಶಾದ್ಯಂತ ಇರುವ ಜನ ಬಂದು ರಾಜಭವನಕ್ಕೆ ಮುತ್ತಿಗೆ ಹಾಕಿದರೆ ಮುಂದಾಗುವ ಯಾವುದೇ ಪರಿಣಾಮಕ್ಕೂ ತಾವು ಹೊಣೆಗಾರರಲ್ಲ ಎಂದು ಎಚ್ಚರಿಸಿದ ಘಟನೆಯೂ ನಡೆಯಿತು. (ಏಜೆನ್ಸೀಸ್)