ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪುಷ್ಪಾರ್ಚನೆ. 
ನ್ಯೂಸ್

ಬಿಟ್ ಕಾಯಿನ್ ಹಗರಣದ ಸಾಕ್ಷ್ಯನಾಶ!; ಸಾಕ್ಷ್ಯಾಧಾರ ಅಳಿಸಿರುವುದು ತನಿಖೆಯಲ್ಲಿ ದೃಢ; ಫೋರೆನ್ಸಿಕ್ ವಿಶ್ಲೇಷಣೆಯಾದರೆ ಸತ್ಯ ಬಯಲು

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಷ್ಟ್ರಮಟ್ಟದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದಲ್ಲಿ ಅಧಿಕಾರಿಗಳು ಹಾಗೂ ಪ್ರಭಾವಿಗಳಿಗೆ ಉರುಳಾಗುವಂತಹ ‘ಸಾಕ್ಷ್ಯನಾಶ’ಪಡಿಸಿರುವುದು ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ದೃಢಪಟ್ಟಿದ್ದು, ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸಿದರೆ ಮಾತ್ರ ಸತ್ಯ ಬಯಲಾಗಲಿದೆ. ಆದರೆ, ಸಾಕ್ಷ್ಯ ನಾಶಪಡಿಸಿರುವ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿಗೆ ವರದಿ ಕೊಟ್ಟು ಹಲವು ತಿಂಗಳಾದರೂ ಈವರೆಗೆ ಯಾವುದೇ ಆದೇಶ ಹೊರಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಹ್ಯಾಕರ್ ಶ್ರೀಕಿ ಪ್ರಕರಣದಲ್ಲಿ ಪಾರದರ್ಶಕ ತನಿಖೆಯಾಗಿದೆ ಎಂದು ಬೆಂಗಳೂರು ಕಮಿಷನರ್ ಕಮಲ್​ಪಂತ್ ಶನಿವಾರ ಸಂಜೆ 4 ಪುಟಗಳ ಸ್ಪಷ್ಟೀಕರಣ ಬಿಡುಗಡೆಯಾದ ಬಳಿಕ ಹಗರಣದ ಬಿಸಿ ತಣ್ಣಗಾಯಿತು ಎನ್ನುವಷ್ಟರಲ್ಲೇ ಬಿಟ್ ಕಾಯಿನ್ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಮಹತ್ವದ ಡಿಜಿಟಲ್ ಸಾಕ್ಷ್ಯಧಾರ ನಾಶವಾಗಿರುವ ವಿಚಾರ ಬೆಳಕಿಗೆ ಬಂದಿರುವುದು ಹಗರಣ ನಡೆದಿದೆ ಎಂಬುದನ್ನು ಸಾಕ್ಷೀಕರಿಸಿದೆ. ಸರ್ಕಾರದ ಇ-ಪ್ರಕ್ಯೂರ್​ವೆುಂಟ್ ಪೋರ್ಟಲ್ ಹ್ಯಾಕ್ ಮಾಡಿ 11 ಕೋಟಿ ರೂ. ದೋಚಿದ್ದ ಪ್ರಕರಣವನ್ನು ಸಿಐಡಿ ವಿಶೇಷ ಘಟಕದ ಅಧಿಕಾರಿಗಳು ತನಿಖೆ ನಡೆಸಿದಾಗ, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಶ್ರೀಕಿ ಬಿಟ್ ಕಾಯಿನ್ ಹಗರಣದ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಬಿಟ್ ಕಾಯಿನ್ ವರ್ಗಾವಣೆಗೆ ಸಂಬಂಧಿಸಿದಂತೆ ಎವಿಡೆನ್ಸ್ ನಾಶಪಡಿಸಿರುವುದು ಗೊತ್ತಾಗಿದೆ. ಆದರೆ, ಯಾರು? ಯಾವಾಗ? ಎಲ್ಲಿ? ಹೇಗೆ? ನಾಶಪಡಿಸಿದ್ದಾರೆ ಎಂಬುದು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ತಜ್ಞರಿಂದ ವಿಶ್ಲೇಷಣೆ ನಡೆಸುವ ಅಗತ್ಯವಿದೆ ಎಂದು ಡಿಜಿಪಿಗೆ ವರದಿ ಕೊಟ್ಟಿದ್ದಾರೆ. ಆದರೆ, ಸತ್ಯ ಬಹಿರಂಗವಾಗುತ್ತೆ ಎಂಬ ಕಾರಣಕ್ಕೆ ವರದಿಯನ್ನೂ ಬಹಿರಂಗಪಡಿಸಿಲ್ಲ. ತನಿಖೆಗೂ ಆದೇಶಿಸಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಜಪ್ತಿ ಏಕೆ ಮಾಡಲಿಲ್ಲ?: ಖುದ್ದು ಆರೋಪಿ ಶ್ರೀಕಿಯೇ ಬಿಟ್ ಕಾಯಿನ್ ವ್ಯಾಲೆಟ್ ತೋರಿಸಿದ್ದ. ನ್ಯಾಯಲಯವೇ ಅನುಮತಿ ಕೊಟ್ಟರೂ ಅದರಲ್ಲಿದ್ದ 186. 811 ಬಿಟ್ ಕಾಯಿನ್​ಗಳನ್ನು ಯಾಕೆ ಜಪ್ತಿ ಮಾಡಲಿಲ್ಲ ಎಂಬುದು ಕಾನೂನು ತಜ್ಞರ ಪ್ರಶ್ನೆ. ಶ್ರೀಕಿ ವ್ಯಾಲೆಟ್​ನಿಂದ ಪೊಲೀಸ್ ವ್ಯಾಲೆಟ್​ಗೆ ವರ್ಗಾಯಿಸಲು ಕೋರ್ಟ್ ಅನುಮತಿ ಕೊಟ್ಟ ಮೇಲೆ ಶ್ರೀಕಿ ವೈಯಕ್ತಿಕ ಖಾತೆಯೋ ಅಥವಾ ಬಿಟ್ ಕಾಯಿನ್ ವಿನಿಮಯ ಕೇಂದ್ರದ ಖಾತೆಯೋ ಯಾವುದಾದರೂ ಸರಿ ಜಪ್ತಿ ಮಾಡಬೇಕಿತ್ತು. ಆರೋಪಿಯೇ ಹೇಳಿದ ಮೇಲೆ ಯಾವ ಕಾರಣಕ್ಕೆ ವರ್ಗಾಯಿಸಿಕೊಳ್ಳಲಿಲ್ಲ. ಬೇರೆ ಕಂಪನಿಗೆ ಸೇರಿದ್ದಾಗಿದ್ದರೆ ಮತ್ತೆ ವರ್ಗಾವಣೆ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.

31 ಕಾಯಿನ್ ಜಪ್ತಿ ಘೋಷಿಸಿದ್ಯಾಕೆ?: 2021 ಜ.15ರಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್​ಗಳನ್ನು ಶ್ರೀಕಿ ಖಾತೆಯಿಂದ ಜಪ್ತಿ ಮಾಡಿರುವುದಾಗಿ ಘೋಷಿಸಿದ್ದರು. ಆದರೀಗ ಪೊಲೀಸರು ಶ್ರೀಕಿಯಿಂದ ಯಾವುದೇ ಬಿಟ್ ಕಾಯಿನ್​ಗಳನ್ನು ಜಪ್ತಿ ಮಾಡಿಲ್ಲ ಎಂದು ಖುದ್ದು ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ ಕೊಟ್ಟಿರುವುದೂ ಅನುಮಾನ ಮೂಡಿಸುತ್ತಿದೆ.

ಸಂಘ-ಸಂಸ್ಥೆಗಳ ಖಾತೆಗೆ ಟ್ರಾನ್ಸ್​ಫರ್: 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರಕ್ಯೂರ್​ವೆುಂಟ್ ವೆಬ್​ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ, 11.55 ಕೋಟಿ ರೂ. ಅನ್ನು ಇತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಕಿ ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳ 14 ಬ್ಯಾಂಕ್ ಖಾತೆಗಳನ್ನು ಬ್ಲಾ್ಯಕ್ ಮಾಡಿ 1.44 ಕೋಟಿ ರೂ. ಜಪ್ತಿ ಮಾಡಿದ್ದರು. ಸರ್ಕಾರದ ಪೋರ್ಟಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಹಣವನ್ನು ಸ್ವಯಂ ಸೇವಾ ಸಂಸ್ಥೆಗಳಾದ ನಾಗ್​ಪುರದ ಉದಯ್ ಗ್ರಾಮ ವಿಕಾಶ್ ಸಂಸ್ಥೆ, ಉತ್ತರ ಪ್ರದೇಶದ ನಿಮ್ಮಿ ಎಂಟರ್​ಪ್ರೖೆಸಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಆನಂತರ ಎನ್​ಜಿಒ ಕಡೆಯಿಂದ ಮಾರಾಟಗಾರ, ಖರೀದಿದಾರ ನೆಪದಲ್ಲಿ ಹಣವನ್ನು ಶ್ರೀಕಿ ಸ್ವೀಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಕಾಡುವ ಪ್ರಶ್ನೆಗಳು?

  • ಶ್ರೀಕಿ ಬಿಟ್ ಕಾಯಿನ್ ವರ್ಗಾವಣೆ ಸಂಬಂಧ ಸಾಕ್ಷ್ಯನಾಶಪಡಿಸಿದ್ದು ಯಾರು? ಏಕೆ?
  • ವಿಧಿವಿಜ್ಞಾನ ತಜ್ಞರಿಂದ ಎವಿಡೆನ್ಸ್ ಡಿಲೀಟ್ ತನಿಖೆಗೆ ವರದಿ ಕೊಟ್ಟರೂ ಆಗದಿದ್ಯಾಕೆ?
  • ಸಾಕ್ಷ್ಯ ನಾಶವಾಗಿರುವುದು ಡಿಜಿಪಿಗೇ ಗೊತ್ತಿದ್ದರೂ ತನಿಖೆಗೆ ಆದೇಶಿಸದಿರುವುದು ಏಕೆ?
  • ಆರೋಪಿ ತನ್ನದೇ ವ್ಯಾಲೆಟ್ ಎಂದರೂ ಅದರಲ್ಲಿ ಬಿಟ್ ಕಾಯಿನ್ ಜಪ್ತಿ ಮಾಡದಿದ್ಯಾಕೆ?
  • ಡ್ರಗ್ಸ್ ಕೇಸಿನ ತನಿಖೆ ನಡೆಸಿದ್ದ ಸಿಸಿಬಿ, ಸೈಬರ್ ಕ್ರೖೆಂ ಪೊಲೀಸರ ನೆರವು ಪಡೆಯಲಿಲ್ಲವೇಕೆ?
  • 31 ಬಿಟ್ ಕಾಯಿನ್ ಮಾಡಿದ್ದಾಗಿ ಆಗ ಹೇಳಿ, ಈಗ ಜಪ್ತಿ ಮಾಡಲೇ ಇಲ್ಲ ಎನ್ನುತ್ತಿರುವುದೇಕೆ?

ಎಫ್​ಎಸ್​ಎಲ್ ತನಿಖೆಯಾದರೇನು?

  • ಯಾವೆಲ್ಲ ವೆಬ್​ಸೈಟ್ ಹ್ಯಾಕ್ ಮಾಡಿ, ಎಷ್ಟು ಬಿಟ್ ಕಾಯಿನ್ ಕಳವಾಗಿದೆ ಎಂಬ ಮಾಹಿತಿ
  • ಯಾವ್ಯಾವ ವ್ಯಾಲೆಟ್​ಗಳಿಂದ ಯಾರ ವ್ಯಾಲೆಟ್​ಗೆ ಎಷ್ಟು ಕಾಯಿನ್ ವರ್ಗಾವಣೆಯಾಗಿದೆ
  • ಬಿಟ್ ಕಾಯಿನ್​ನ ಜತೆಗೆ ಹಣಕಾಸಿನ ವ್ಯವಹಾರದ ಬಗ್ಗೆಯೂ ಸಮಗ್ರ ವಿವರ ಬಹಿರಂಗ
  • ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಮಾಹಿತಿ ಯಾವಾಗ? ಹೇಗೆ? ಡಿಲೀಟ್ ಮಾಡಲಾಗಿದೆ

ತಪ್ಪಿತಸ್ಥರನ್ನು ಬಿಡುವುದಿಲ್ಲ ಬೊಮ್ಮಾಯಿ ಗುಟುರು

ಬಿಟ್​ಕಾಯಿನ್ ದಂಧೆಯಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಯಾರೇ ಭಾಗಿಯಾಗಿರಲಿ ಬಲಿ ಹಾಕದೆ ಬಿಡೆವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈ ಪ್ರಕರಣವನ್ನು ಬಯಲಿಗೆ ತಂದವರೇ ನಾವು. ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದರು. ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಯಾಗಿದ್ದು, ವಿದೇಶದಲ್ಲಿ ಹಣಕಾಸು ವ್ಯವಹಾರದ ನಂಟು ಬಂದ ಕಾರಣ ಹೆಚ್ಚಿನ ತನಿಖೆಗಾಗಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಇಂಟರ್​ಪೋಲ್​ಗೆ ಶಿಫಾರಸು ಮಾಡಿ, ಅವರು ಕೋರಿದ ಅಗತ್ಯ ಮಾಹಿತಿ ಒದಗಿಸಲಾಗಿದೆ ಎಂದು ವಿವರಿಸಿದರು. ರಾಜ್ಯ ಪೊಲೀಸರು ತನಿಖೆ ಕಾಲಕ್ಕೆ ವಶಪಡಿಸಿಕೊಂಡ ಬಿಟ್​ಕಾಯಿನ್ ಸಂಖ್ಯೆಗಳ ಗೊಂದಲದ ಬಗ್ಗೆ ಉತ್ತರಿಸಿ, ಆರೋಪಿ ಶ್ರೀಕೃಷ್ಣ ತನ್ನ ಖಾತೆ ಎಂದು ಬೇರೆ ಯಾವುದೋ ಎಕ್ಸ್ ಚೇಂಜ್ ಖಾತೆ ನೀಡಿದ್ದಾನೆ ಎಂದು ಸಮಜಾಯಿಷಿ ನೀಡಿದರು.

ಪಾಠ ಕಲಿಯಬೇಕಿಲ್ಲ: ಆರೋಪಿಗಳನ್ನು ಬಿಟ್ಟು ಕೊಟ್ಟು, ಮುಕ್ತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬಿಟ್ಟವರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಬೊಮ್ಮಾಯಿ ತಿರುಗೇಟು ನೀಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬಂಧಿಸಿ, ಬಿಟ್ಟು ಕಳುಹಿಸಲಾಯಿತು. ನಿರೀಕ್ಷಣಾ ಜಾಮೀನು ಪಡೆದಾಗಲೂ ವಿಚಾರಣೆಗೆ ಅವಕಾಶವಿತ್ತು. ಆಗಿನ ಮುಖ್ಯಮಂತ್ರಿ ಹಾಗೂ ಸಚಿವರು ಈ ಪ್ರಕರಣದ ಬಗ್ಗೆ ಗಮನಹರಿಸಲಿಲ್ಲ. ಈಗ ತನಿಖೆ ನಡೆಸುತ್ತಿರುವ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದು ಛೇಡಿಸಿದರು. ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಕೂಡಲೇ ಕ್ರಮವಾಗಬೇಕು ಎಂದು ಇಚ್ಛಿಸಿದ್ದರೆ ತನಿಖೆ ನಡೆಸುತ್ತಿರುವ ಇಡಿಗೆ ಸಾಕ್ಷ್ಯಾಧಾರ ಒದಗಿಸಲಿ ಎಂದು ಮತ್ತೆ ಸವಾಲೆಸೆದರು.

ಸುರ್ಜೆವಾಲಾಗೆ ಸಿಎಂ ತಿರುಗೇಟು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರಿಸಿದ್ದು, 2016ರಿಂದ ಪ್ರಕರಣಕ್ಕೆ ಕರ್ನಾಟಕದೊಂದಿಗೆ ಸಂಬಂಧ ಇರುವುದಾದರೆ ಅವರ ಸರ್ಕಾರ ತನಿಖೆ ನಡೆಸಲಿಲ್ಲವೇಕೆ ಎಂದು ಸಿಎಂ ಬೊಮ್ಮಾಯಿ ಮರು ಪ್ರಶ್ನಿಸಿದರು. ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ವಿಚಾರಗಳನ್ನು ಪ್ರಸ್ತಾಪಿಸುವುದು ಅವರ ಚಿಂತನೆಯ ದಿವಾಳಿತನ ಎತ್ತಿ ತೋರಿಸುತ್ತದೆ ಎಂದು ತಿರುಗೇಟು ನೀಡಿದರು. ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರು ಈ ರೀತಿಯ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಸಾಂರ್ದಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಬೊಮ್ಮಾಯಿ ಕುಟುಕಿದರು.

ದಾಖಲೆಗಳಿದ್ದರೆ ಬಹಿರಂಗ ಪಡಿಸಿ

ಮೈಸೂರು: ಕಾಂಗ್ರೆಸ್ ನಾಯಕರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಕಾಂಗ್ರೆಸ್​ನವರು ಗುಸು ಗುಸು ಸುದ್ದಿ ಹರಡುತ್ತಿದ್ದು, ಜನ್​ಧನ್ ಖಾತೆಗಳು ಹ್ಯಾಕ್ ಆಗಿವೆಯೆಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ, ಯಾರ ಖಾತೆ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಬಹಿರಂಗ ಮಾಡಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು. ಹ್ಯಾಕರ್ ಶ್ರೀಕೃಷ್ಣನನ್ನು ಬಂಧಿಸಿದವರ ವಿರುದ್ಧ ಕಾಂಗ್ರೆಸ್ ಏಕೆ ಆರೋಪ ಮಾಡುತ್ತಿದೆ? ಈತನಿಗೆ ವ್ಯವಹಾರ ಇರೋದು ಕಾಂಗ್ರೆಸ್ ಮುಖಂಡರ ಮಕ್ಕಳ ಜತೆಯೇ. ‘ಮರಿ ಖರ್ಗೆ’ ಆಗಾಗ ಮಾಧ್ಯಮಗಳ ಮುಂದೆ ಬಂದು ‘ಕಾ ಕಾ’ ಎನ್ನುತ್ತಿ ದ್ದಾರೆ. ದಿನವೂ ರಂಗು ರಂಗಾದ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಪ್ರಿಯಾಂಕ ಖರ್ಗೆಗೆ ಕುಟುಕಿದರು.

ಕಾಂಗ್ರೆಸ್ ದಾಖಲೆರಹಿತ ಆರೋಪ

ಬಾಗೇಪಲ್ಲಿ: ಬಿಜೆಪಿಯನ್ನು ಎದುರಿಸಲು ಸಾಧ್ಯವಾಗದೆ ಬಿಟ್ ಕಾಯಿನ್ ಹಗರಣ ಕುರಿತು ಕಾಂಗ್ರೆಸ್​ನವರು ಸತ್ಯಕ್ಕೆ ದೂರವಾದ ಮಾತುಗಳನ್ನಾಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಬೆಲೆ ಕಟ್ಟಲಾಗದಂತಹ ಪ್ರೀತಿ ತೋರಿಸುತ್ತಿದ್ದು ದಿನೇದಿನೆ ಬಿಜೆಪಿ ಶಕ್ತಿ ಹೆಚ್ಚುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್​ನವರು ಬಿಟ್ ಕಾಯಿನ್ ವಿಚಾರದಲ್ಲಿ ದಾಖಲೆರಹಿತ ಸುಳ್ಳುಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದರು.

ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ

ಬೆಂಗಳೂರು: ಪಕ್ಷದ ವರಿಷ್ಠರಿಂದ ಫರ್ವನು ಹೊರಡುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರು ಮೈಚಳಿ ಬಿಟ್ಟು ಮೇಲೆದ್ದು, ಬಿಟ್​ಕಾಯಿನ್ ಪ್ರಕರಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ವರಿಷ್ಠರು ಹೆಣೆದ ತಂತ್ರಗಾರಿಕೆ ಪ್ರಕಾರ ಬೆಂಗಳೂರು, ಮೈಸೂರು ಸೇರಿ ಒಟ್ಟು 10 ಕಡೆ ಸಂಸದ-ಶಾಸಕರು, ಪದಾಧಿಕಾರಿಗಳು ಕೈ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದು, ಸೋಮವಾರ ಮತ್ತೆ 10 ಜಿಲ್ಲೆಗಳಿಂದಲೂ ಹೇಳಿಕೆಗಳು ಹೊರಬೀಳಲಿವೆ.

ದೊಡ್ಡದಾಗಿ ದಾಖಲೆ ಬಿಡುಗಡೆ ಮಾಡುತ್ತೇವೆ, ಹೆಸರು ಬಹಿರಂಗಪಡಿಸುತ್ತೇವೆ ಎಂದು ಹೇಳಿ ಇಲ್ಲದ ಹಗರಣವನ್ನು ಕಾಂಗ್ರೆಸ್ ಸೃಷ್ಟಿಸಿ, ನಿರಾಧಾರ ಆರೋಪ ಹೊರಿಸುತ್ತಿದೆಂದು ಬಿಜೆಪಿ ನಾಯಕರು ಪ್ರತ್ಯಾರೋಪ ಮಾಡಿದ್ದಾರೆ. ಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ಅವ್ಯವಹಾರವಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಬಳಿ ಯಾವುದೇ ದಾಖಲೆಗಳಿಲ್ಲ. ಆದರೂ ವಿವಾದ ಸೃಷ್ಟಿಸಿ ರಾಜಕೀಯ ದುರ್ಲಾಭ ಪಡೆಯಬಹುದೆಂದು ಹಗಲುಗನಸು ಕಾಣುತ್ತಿದ್ದು, ಇದೇ ಬಿಟ್​ಕಾಯಿನ್ ತಿರುಗುಬಾಣವಾಗಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ. ಪ್ರಕರಣದಲ್ಲಿ ದಾಖಲಾದ ಎಫ್​ಐಆರ್​ಗಳು, ಕೋರ್ಟ್​ಗೆ ಸಲ್ಲಿಕೆಯಾದ ದೋಷಾರೋಪ ಪಟ್ಟಿ ಬಳಸಿಕೊಂಡು ವಾಸ್ತವಾಂಶಗಳನ್ನು ತಿರುಚಿ ತನಿಖೆ ದಿಕ್ಕು ತಪ್ಪಿಸಲು ಕಾಂಗ್ರೆಸ್ ಹವಣಿಸಿದೆ ಎಂದು ಚಾಮರಾಜನಗರ, ಮೈಸೂರು, ಕೊಪ್ಪಳ ಜಿಲ್ಲೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಹೆಸರು ಬಹಿರಂಗಕ್ಕೆ ಸವಾಲು: ಬಿಟ್​ಕಾಯಿನ್ ಪ್ರಕರಣದಲ್ಲಿ ಅವರಿದ್ದಾರೆ, ಇವರಿದ್ದಾರೆ ಎಂದು ಊಹಾಪೋಹ ಹರಡುವುದಲ್ಲ. ತಾಕತ್ತಿದ್ದರೆ ಶಾಮೀಲಾದವರ ಹೆಸರು ಬಹಿರಂಗಪಡಿಸಿ, ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು. ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ, ಜನಪರ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಕಾಂಗ್ರೆಸ್​ಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದವರು ಮಾಧ್ಯಮಗೋಷ್ಠಿಯಲ್ಲಿ ದೂರಿದರು.