ವಾರ್ಷಿಕ ಒಂದೋ ಎರಡೋ ಬೆಳೆ ಬೆಳೆಯುವುದರಿಂದ ರೈತರ ಆದಾಯ ದ್ವಿಗುಣವಾಗಲು ಸಾಧ್ಯವಿಲ್ಲ. ಬಹುಬೆಳೆ ಪದ್ಧತಿ, ಮೌಲ್ಯವರ್ಧನೆ, ಸಂಸ್ಕರಣೆ, ಮಾರುಕಟ್ಟೆ, ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಉಪಕ್ರಮಗಳನ್ನು ಅನುಸರಿಸುವ ಮೂಲಕ ಆದಾಯ ದ್ವಿಗುಣ ಮಾಡಿಕೊಳ್ಳಬಹುದು. ಭೂ ಫಲವತ್ತತೆ ಕಾಯ್ದುಕೊಳ್ಳಲು ಮೊದಲ ಪ್ರಾಶಸ್ತ್ಯ ನೀಡಬೇಕು. ಕಾಲಕಾಲಕ್ಕೆ ಮಣ್ಣುಪರೀಕ್ಷೆ ಮಾಡಿಸಬೇಕು. ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸಬೇಕು.
ಲಘುಪೋಷಕಾಂಶಗಳ ಬಗ್ಗೆ ಗಮನ: ಭೂಮಿಯಲ್ಲಿ ಸಾಮಾನ್ಯವಾಗಿ ಲಘುಪೋಷಕಾಂಶಗಳಿರುತ್ತವೆ. ಆದರೆ, ಬೆಳೆಗೆ ಬೇಕಾದ ಲಘುಪೋಷಕಾಂಶಗಳ ಕೊರತೆ ಇರುತ್ತದೆ. ಹಾಗಾಗಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಕೊಡುವ ಮೂಲಕ ಸೂಕ್ಷ್ಮ ಜೀವಿಗಳ ಕ್ರಿಯೆಯನ್ನು ವೃದ್ಧಿಸಬೇಕು.
ಅಗತ್ಯಕ್ಕೆ ತಕ್ಕಷ್ಟು ಬಳಕೆ: ಅತ್ಯಂತ ನಿಖರವಾಗಿ ರಸಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡಬೇಕು. ಈ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಬೇಕೇ ಹೊರತು ವ್ಯಾಪಾರಿಗಳ ಮಾತು ಕೇಳಿ ಬೆಳೆಗೆ ರಸಗೊಬ್ಬರ/ಕೀಟನಾಶಕ ಸಿಂಪರಣೆ ಮಾಡಬಾರದು. ಅಗತ್ಯವಿದಷ್ಟೇ ರಸಗೊಬ್ಬರ, ಕೀಟನಾಶಕ ಒದಗಿಸಬೇಕು.
ಯಾಂತ್ರೀಕರಣಕ್ಕೆ ಒತ್ತು: ರೈತರು ಕೃಷಿ ಯಾಂತ್ರೀಕರಣಕ್ಕೆ ಒತ್ತು ಕೊಡಬೇಕು. ಅನಗತ್ಯ ನೀರು ಬಳಕೆ, ಪರಿಕರ, ಅತಿಯಾದ ಗೊಬ್ಬರ ಬಳಕೆ ಕೈಬಿಡಬೇಕು. ಬೆಳೆಯ ಅಗತ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಣ್ಣ ಹಿಡುವಳಿದಾರರು ಸ್ವಂತ ಬಂಡವಾಳ ಹೂಡಿ ದೊಡ್ಡ ಯಂತ್ರೋಪಕರಣ ಖರೀದಿ ಮಾಡಬಾರದು. ವರ್ಷದಲ್ಲಿ ಕೆಲವೇ ಕೆಲವು ದಿನ ಬಳಸುವ (ಟ್ರಾ್ಯಕ್ಟರ್, ಟಿಲ್ಲರ್)ಯಂತ್ರಗಳನ್ನು ಸ್ವಂತ ಖರೀದಿ ಮಾಡುವ ಬದಲು ಬಾಡಿಗೆ ರೂಪದಲ್ಲಿ ಪಡೆದು ಬಳಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಉಳಿತಾಯವಾಗುತ್ತದೆ.
ಕೃಷಿ ಯಂತ್ರಧಾರೆ ಬಲವರ್ಧನೆ: ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೃಷಿ ಕಾಯಕಕ್ಕೆ ಆಧುನಿಕ ಯಂತ್ರಗಳು ದೊರೆಯುವಂತಾಗಲಿ ಎಂಬ ಉದ್ದೇಶದಿಂದ ಸರ್ಕಾರ ಕೃಷಿ ಯಂತ್ರಧಾರೆ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಅಂತಹ 324 ಕೇಂದ್ರಗಳಿವೆ. ಈ ಕೇಂದ್ರಗಳನ್ನು ಸರ್ಕಾರ ಮತ್ತಷ್ಟು ಬಲಪಡಿಸುವ ಮೂಲಕ ರೈತರಿಗೆ ನೆರವಾಗಬೇಕು.
ಒಂದು ಜಿಲ್ಲೆ, ಒಂದು ಉತ್ಪನ್ನ: ಆತ್ಮನಿರ್ಭರ ಯೋಜನೆಯಡಿ ಕೇಂದ್ರ ಸರ್ಕಾರ ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮ ರೂಪಿಸಿದೆ. ರಾಜ್ಯದಲ್ಲಿ ಕೃಷಿ ಹವಾಮಾನದ 10 ವಲಯಗಳನ್ನು ಗುರುತಿಸಿದ್ದು, ಆ ಪೈಕಿ 4 ವಲಯಗಳು ಜಿಕೆವಿಕೆ ವ್ಯಾಪ್ತಿಗೆ ಒಳಪಡುತ್ತವೆ. ಹಾಸನ ಜಿಲ್ಲೆಯಲ್ಲಿ ತೆಂಗು ಮತ್ತು ಶುಂಠಿ, ಮಂಡ್ಯದಲ್ಲಿ ಕಬ್ಬು, ಚಾಮರಾಜನಗರದಲ್ಲಿ ಅರಿಶಿಣ, ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಗಳನ್ನು ಗುರುತಿಸಲಾಗಿದೆ. ಈ ಉತ್ಪನ್ನಗಳ ಬಗ್ಗೆ ವಿಶ್ವವಿದ್ಯಾಲಯ ಹೆಚ್ಚಿನ ಸಂಶೋಧನೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತಿತರ ವಿಷಯಗಳ ಕುರಿತು ಅಧ್ಯಯನ ಮಾಡಲಿದೆ.
ನಿಶ್ಚಿತ ಆದಾಯ: ರೈತರು ನಿಶ್ಚಿತ ಆದಾಯ ಪಡೆಯುವ ನಿಟ್ಟಿನಲ್ಲಿ ಅರಣ್ಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ತಮ್ಮ ಜಮೀನಿನ ಬದುಗಳಲ್ಲಿ ಮಹಾಗನಿ, ಸಾರ್ವೆ ಮರ, ತೇಗ, ಬಿದಿರು, ಬೇವು, ಹೆಬ್ಬೇವು ಮತ್ತಿತರ ಬಹುವಾರ್ಷಿಕ ಬೆಳೆ ಬೆಳೆಯುವ ಮೂಲಕ ನಿಶ್ಚಿತ ಆದಾಯವನ್ನು ಪಡೆಯಬೇಕು. ಆ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು.
ಹವಾಮಾನಕ್ಕೆ ಪೂರಕ: ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ಮಳೆ ಬೀಳುವ ಅವಧಿ ಹಾಗೂ ಪ್ರಮಾಣದಲ್ಲಿ ಏರುಪೇರಾಗಿದೆ. ಹಾಗಾಗಿ ಅದಕ್ಕೆ ಪೂರಕವಾಗಿ ಅಲ್ಪಾವಧಿ ಮತ್ತು ದೀರ್ಘಾವಧಿ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಹವಾಮಾನ ಚತುರ ಕೃಷಿ ಮಾಡುವ ಮೂಲಕ ರೈತರು ಆದಾಯ ಪಡೆದುಕೊಳ್ಳಬೇಕು.
ಆರ್ಯ ಯೋಜನೆ: ದೇಶದಲ್ಲಿ ಗ್ರಾಮೀಣ ಭಾಗದ ಯುವ ರೈತರು ಕೃಷಿಯಿಂದ ವಿಮುಕ್ತರಾಗಿ ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಪೈಲಟ್ ಪ್ರಾಜೆಕ್ಟ್ ಮಾದರಿಯಲ್ಲಿ ಅಟ್ರಾ್ಯಕ್ಟಿಂಗ್ ಅಂಡ್ ರಿಟೇನಿಂಗ್ ಯೂತ್್ಸ ಇನ್ ಅಗ್ರಿಕಲ್ಚರ್ (ಎಆರ್ವೈಎ) ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯೋಜನೆ ಚಾಲ್ತಿಯಲ್ಲಿದ್ದು, ಯುವ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವುದು, ನೀರಾವರಿ ಪದ್ಧತಿ, ಬೆಳೆ ಸಂರಕ್ಷಣೆ, ಬೆಳೆ ಕಟಾವು, ಬೆಳೆದ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ (ಬಳಕೆದಾರರು, ಕಂಪನಿಗಳು, ಗ್ರಾಹಕರು)ಗೆ ನೇರ ಮಾರಾಟ ಮಾಡುವ ವ್ಯವಸ್ಥೆ ಬಗ್ಗೆ ತಿಳಿಸಲಾಗುತ್ತದೆ.
ಪಶುಸಂಗೋಪನೆ: ರೈತರು ಕೃಷಿಯ ಜತೆಗೆ ಪಶುಸಂಗೋಪನೆ ಭಾಗವಾಗಿ ಕೋಳಿಸಾಕಣೆ, ಮೀನುಸಾಕಣೆ, ಕುರಿ-ಮೇಕೆ ಸಾಕಣೆ ಸೇರಿದಂತೆ ಸಮಗ್ರ ಕೃಷಿಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಪಶುಸಂಗೋಪನೆ ಎಂದಾಕ್ಷಣ ಅತಿ ಹೆಚ್ಚು ಎಚ್ಎಫ್ ತಳಿಗಳ ಕಡೆಗೆ ಮುಖಮಾಡದೆ ದೇಸಿ ತಳಿಗಳನ್ನು ಬಳಕೆ ಮಾಡಬೇಕು. ದೇಸಿ ತಳಿ ಹಸುಗಳ ಹಾಲು ಹೆಚ್ಚಾಗಿ ಬರದಿದ್ದರೂ ಹಾಲು ಹೆಚ್ಚು ಪೋಷಕಾಂಶದಿಂದ ಕೂಡಿರುತ್ತದೆ. ಹಳ್ಳಿಕಾರ್, ಮಲೆನಾಡಿನ ಗಿಡ್ಡ, ಅಮೃತ್ವುಹಲ್, ಸಾಹಿವಲ್, ಗುಜರಾತ್ನ ಗಿರ್ ತಳಿ, ಪುಂಗನೂರ್ ಎಂಬ ಹಲವು ತಳಿಗಳಿವೆ. ಬ್ರೆಜಿಲ್ನಲ್ಲಿ ಅತಿಹೆಚ್ಚು ಹಾಲು ಕೊಡುವ ಹಸು ಮತ್ತು ಹೋರಿಗಳ ಮೂಲ ತಳಿ ನಮ್ಮ ದೇಶದ್ದಾಗಿದೆ. ಈಗ ನಮ್ಮ ದೇಶಕ್ಕೆ ತಳಿಯನ್ನು ಕೊಡುವುದಾಗಿ ಮುಂದೆ ಬರುತ್ತಿದೆ.
ಹೀಗಿರಲಿ ಬೆಳೆಪದ್ಧತಿ...: ಹವಾಮಾನಕ್ಕೆ ಅನುಗುಣವಾಗಿ ಬೆಳೆಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಪೂರ್ವ ಮುಂಗಾರು ಮೇನಲ್ಲಿ ಆರಂಭವಾದರೆ 4 ತಿಂಗಳಿನ ಬೆಳೆಗಳನ್ನು ಬೆಳೆಯಬೇಕು. ಮಳೆ ತಡವಾದಲ್ಲಿ 2 ರಿಂದ 3 ತಿಂಗಳ ಬೆಳೆಗಳನ್ನು ಬೆಳೆಯಬೇಕು. ಅಲಸಂದೆ, ಹುರುಳಿ, ಕಡಲೆ, ಮೆಕ್ಕೆಜೋಳ, ತೊಗರಿ, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಸೇರಿ ವಿವಿಧ ಬೆಳೆಗಳನ್ನು ಬೆಳೆಯುವುದು ಸೂಕ್ತ.
| ಎಸ್. ರಾಜೇಂದ್ರ ಪ್ರಸಾದ್ ಕುಲಪತಿ, ಬೆಂಗಳೂರು ಕೃಷಿ ವಿವಿ
ಕೃಷಿ ಭೂಮಿ ಹೊಂದಿರುವ ಪ್ರತಿಯೊಬ್ಬ ರೈತರೂ ಪ್ರತಿ 3 ವರ್ಷಕ್ಕೊಮ್ಮೆ ಮಣ್ಣುಪರೀಕ್ಷೆ ಮಾಡಬೇಕು. ಇದರಲ್ಲಿ ಏಕವಾರ್ಷಿಕ ಬೆಳೆ ಮತ್ತು ಬಹುವಾರ್ಷಿಕ ಬೆಳೆ ಪದ್ಧತಿಗೆ ಅನುಗುಣವಾಗಿ ಪರೀಕ್ಷೆ ಮಾಡಿಸಬೇಕು. ಏಕವಾರ್ಷಿಕ ಬೆಳೆಗೆ ಭೂಮಿಯ ಮೇಲ್ಪದರ 45 ಸೆ.ಮೀ ಮಣ್ಣನ್ನು ಸರಿಸಿ ಅಲ್ಲಿಂದ ಅರ್ಧ ಅಡಿ ಆಳಕ್ಕೆ ‘ವಿ’ ಆಕಾರದಲ್ಲಿ ಗುಂಡಿ ತೋಡಬೇಕು. ಗುಂಡಿಯಲ್ಲಿದ್ದ ಮಣ್ಣನ್ನು ಹೊರತೆಗೆದು, ಸುತ್ತಲಿನ ಅರ್ಧ ಇಂಚು ಮಣ್ಣಿನ ಪದರವನ್ನು ತೆಗೆದು ಸಂಗ್ರಹಿಸಬೇಕು. ಇಡೀ ಜಮೀನಿನಲ್ಲಿ ಝೆಡ್ ಮಾದರಿ ಅಥವಾ ಜಿಗ್ಜಾಗ್ ಮಾದರಿಯಲ್ಲಿ 4 ರಿಂದ 5 ಸ್ಥಳಗಳಲ್ಲಿ ಗುಂಡಿ ತೋಡಿ ಇದೇ ಮಾದರಿಯಲ್ಲಿ ಮಣ್ಣು ಒಂದೆಡೆ ಸಂಗ್ರಹಿಸಬೇಕು. ಒಂದೆಡೆ ಸಂಗ್ರಹಿಸಿದ ಮಣ್ಣನ್ನು ಒಂದು ಚೀಲದ ಮೇಲೆ ಮಿಶ್ರಣ ಮಾಡಿ, ಅದನ್ನು ವೃತ್ತಾಕಾರದಲ್ಲಿ ಹರಡಿ 4 ಭಾಗ ಮಾಡಿ ಅರ್ಧಭಾಗ ಇಟ್ಟುಕೊಳ್ಳಬೇಕು. ಇದೇ ಮಾದರಿಯನ್ನು ಪುನರಾವರ್ತನೆ ಮಾಡಿ ಅರ್ಧ ಕೆ.ಜಿ. ಮಣ್ಣನ್ನು ಪರೀಕ್ಷೆ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.
ಎಲ್ಲ ಬಗೆಯ ಸಸ್ಯಪ್ರಬೇಧಗಳಲ್ಲಿ ವೇಗವಾಗಿ ಬೆಳೆಯುವ ಮತ್ತು ರೈತರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ತರುವ ಬಿದಿರು ಬೆಳೆಯಲು ಪೂರಕ ಯೋಜನೆ ಸಿದ್ಧಪಡಿಸಲಾಗಿದೆ. 2007ರಲ್ಲಿ ಬಿದಿರನ್ನು ಅರಣ್ಯ ಬೆಳೆಯ ಪಟ್ಟಿಯಿಂದ ಹೊರಗಿಟ್ಟು, ಸಾಮಾನ್ಯ ಕೃಷಿಯ ಬೆಳೆಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ, ಬಿದಿರನ್ನು ಕಡಿಯಲು, ಸಾಗಣೆ ಮಾಡಲು ಮತ್ತು ಮಾರಾಟ ಮಾಡಲು ಯಾವುದೇ ಅಡ್ಡಿ, ಆತಂಕವಿಲ್ಲ. ಆದ್ದರಿಂದ ರೈತರು ಕಡಿಮೆ ಜಮೀನಿನಲ್ಲಿ, ಕಡಿಮೆ ಸಮಯದಲ್ಲಿ ಅತ್ಯಧಿಕ ಆದಾಯ ಗಳಿಸಲು ನೆರವಾಗುವಂತೆ ಬಿದಿರು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಬಿದಿರು ಮುಳ್ಳಿನ ಸಸ್ಯವಾಗಿದ್ದು, ಕಟಾವು ಕಷ್ಟವಾಗಲಿದೆ ಎಂದು ಹಿಂಜರಿಯದಂತೆ ಮುಳ್ಳಿಲ್ಲದ ತಳಿ ಸಂಶೋಧಿಸಲಾಗಿದೆ. ಸರ್ಕಾರದಿಂದ ಬಡ್ಡಿರಹಿತ ಸಾಲ ನೀಡಿಕೆ ಸೇರಿ ಕೆಲವು ಯೋಜನೆಗಳು ಪ್ರಗತಿ ಹಂತದಲ್ಲಿದ್ದು, ಶೀಘ್ರ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ.
ಜಗತ್ತಿನಲ್ಲಿ 1,500ಕ್ಕೂ ಅಧಿಕ ಬಿದಿರು ತಳಿಯಿದ್ದು, ಈ ಪೈಕಿ ನಮ್ಮ ದೇಶದಲ್ಲಿ 150 ತಳಿಗಳಿವೆ. ಜಿಕೆವಿಕೆ ಆವರಣದಲ್ಲಿ 6 ಹೊಸ ತಳಿಯ ಬಿದಿರು ಬೆಳೆಯಲಾಗುತ್ತಿದೆ. ಇವುಗಳಲ್ಲಿ ಮುಳ್ಳುಗಳಿಲ್ಲದ ‘ಭೀಮಾ ಬಂಬೂ’ ವೇಗವಾಗಿ ಬೆಳೆಯುವ ತಳಿಯಾಗಿದೆ. 1 ಎಕರೆ ವಿಸ್ತೀರ್ಣದಲ್ಲಿ 15 ಅಡಿಗೆ ಒಂದು ಸಾಲಿನಂತೆ, 5ರಿಂದ 6 ಅಡಿಗೆ ಒಂದು ಗಿಡವನ್ನು ನಾಟಿ ಮಾಡಬೇಕು. ಒಂದು ಎಕರೆಯಲ್ಲಿ 900ರಿಂದ 1 ಸಾವಿರ ಗಿಡ ನಾಟಿ ಮಾಡಬಹುದಾಗಿದೆ. 3 ವರ್ಷಕ್ಕೆ ಕಟಾವಿಗೆ ಬರಲಿದ್ದು, 30 ರಿಂದ 40 ಟನ್ ಇಳುವರಿ ಬರುತ್ತದೆ. ಕನಿಷ್ಠ 5 ಸಾವಿರ ರೂ.ನಂತೆ ಟನ್ ಬಿದಿರು ಮಾರಾಟ ಮಾಡಿದರೂ 2 ಲಕ್ಷಕ್ಕಿಂತ ಅಧಿಕ ಆದಾಯ ಗಳಿಸಬಹುದು.
ದೇಶದಲ್ಲಿ ಈಗಾಗಲೇ ‘ಜಿಲ್ಲೆಗೊಂದು ಬೆಳೆ’ ಎಂಬ ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಮತ್ತು ವಾತಾವರಣಕ್ಕೆ ಅನುಗುಣವಾಗಿ ಯಾವ ಬೆಳೆ ಸೂಕ್ತ ಎಂಬುದರ ಆಧಾರದ ಮೇಲೆ ‘ಒಂದು ಜಿಲ್ಲೆ ಒಂದು ಉತ್ಪಾದನೆ ( ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್- ಒಡಿಒಪಿ)’ ಯೋಜನೆ ಜಾರಿಗೆ ತರಲಾಗುತ್ತಿದೆ. ಚಾಮರಾಜನಗರ ಅರಿಶಿಣ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಟೊಮ್ಯಾಟೋ, ರಾಮನಗರ ರೇಷ್ಮೆ, ತುಮಕೂರು ತೆಂಗು ಸೇರಿ ಹಲವು ಬೆಲೆಗಳು ಹಂಚಿಕೆಯಾಗಿವೆ. ಬೆಳೆಗೆ ಅನುಗುಣವಾಗಿ ಬೆಳೆ ಕಟಾವು ಯಂತ್ರ, ಔಷಧ ಸಿಂಪಡಣೆ, ಸಂಸ್ಕರಣ ಘಟಕ, ಸಂಗ್ರಹಣೆಗೆ ಘಟಕ, ಪ್ಯಾಕೇಜಿಂಗ್ ಮತ್ತು ಗ್ರಾಹಕರಿಗೆ ತಲುಪವ ರೀತಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ.
ಕೃಷಿ ಜಮೀನಿನಲ್ಲಿ ಬೆಳೆಗಳ ಜತೆಗೆ, ಅರಣ್ಯ ಕೃಷಿಯ ಮಾದರಿಗಳಲ್ಲಿ ಮರಗಳನ್ನು ಬೆಳೆಸಲು ಅವಕಾಶವಿದೆ. ಬದುಗಳಲ್ಲಿ ಸುತ್ತಲೂ ಮರವಾಗಿ ಬೆಳೆಯುವ ಸಸಿಗಳನ್ನು ನಾಟಿ ಮಾಡಬೇಕು. ಬೇವು, ತೇಗ, ಸಾಗುವಾನಿ, ಮಹಾಗನಿ, ಸಿಲ್ವರ್ ಓಕ್, ಶ್ರೀಗಂಧ, ಹೆಬ್ಬೇವು ಸೇರಿ ಹಲವು ಜಾತಿಯ ಮರಗಳನ್ನು ಬೆಳೆಸಬೇಕು. ಇದರಿಂದ ಸಾಮಾನ್ಯ ದಿನಗಳಲ್ಲಿ ಬೆಳೆಗಳ ಜತೆಗೆ, 3 ರಿಂದ 5 ವರ್ಷಕ್ಕೊಮ್ಮೆ ಮರಗಳನ್ನು ಕಟಾವು ಮಾಡಿ ಲಾಭವನ್ನೂ ಗಳಿಸಬಹುದು. ಇದರಿಂದ ಬದುವಿನ ಸಂರಕ್ಷಣೆ ಜತೆಗೆ, ಲಾಭವೂ ಸಿಗುತ್ತದೆ.
| ಬಿ.ಸಿ.ಪಾಟೀಲ್ ಕೃಷಿ ಸಚಿವರು
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಈ ವರ್ಷ 10 ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಭತ್ತ (ಕೆಎಂಪಿ-220 ಮತ್ತು ಎಂಎಸ್ಎನ್-99), ರಾಗಿ (ಕೆಎಂಆರ್-316), ನವಣೆ (ಜಿಪಿಯುಎಫ್-3), ಸಾಮೆ (ಜಿಪಿಯುಎಲ್-6), ಬರಗು (ಜಿಪಿಯುಪಿ-28), ಬೀಜದ ದಂಟು (ಕೆಬಿಜಿಎ-15), ಕಬ್ಬು (ಸಿಒವಿಸಿ-18061) ಹಲಸು (ಬೈರಚಂದ್ರ), ಮೇವಿನ ತೋಕೆ ಗೋಧಿ (ಆರ್ಒ-11-1) ನೂತನ ತಳಿಗಳಾಗಿವೆ. ಜತೆಗೆ 28 ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಈ ಎಲ್ಲ ತಳಿಗಳು ಹಿಂದಿನ ತಳಿಗಳಿಗಿಂತ ಶೇ.10 ಹೆಚ್ಚು ಇಳುವರಿ ಸಾಮರ್ಥ್ಯ ಹೊಂದಿದ್ದು, ಬೇಗನೆ ರೋಗಕ್ಕೆ ತುತ್ತಾಗುವುದಿಲ್ಲ.
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) 4 ಅಪ್ಲಿಕೇಷನ್ಗಳನ್ನು ಅಭಿವೃದ್ಧಿ ಪಡಿಸಿದೆ. ಬೀಜ್ ಆಧಾರ್- ಸಾರ್ವಜನಿಕ ಮತ್ತು ಖಾಸಗಿ ಉದ್ಯಮಗಳಿಂದ ಹೊಸದಾಗಿ ಉತ್ಪಾದಿಸಲಾದ ಬೀಜಗಳ ತಂತ್ರಜ್ಞಾನದ ಬಗ್ಗೆ ಈ ಆಪ್ನಲ್ಲಿ ಮಾಹಿತಿ ಇರುತ್ತದೆ. 30 ಬೀಜದ ಕಂಪನಿಗಳು, 104 ವಿತರಕರು, 500 ಬೀಜಗಳ ತಳಿಗಳ ಬಗ್ಗೆ ಮಾಹಿತಿಯಿದೆ. ಒಟ್ಟು 15 ಸಾವಿರಕ್ಕೂ ಅಧಿಕ ಜನರು ಈ ಆಪ್ ಬಳಸುತ್ತಿದ್ದಾರೆ.
ಫಾರ್ಮ್ ಕ್ಯಾಲ್ಕುಲೇಟರ್ ಆ್ಯಪ್: ಒಂದು ಬೆಳೆಗೆ ಬೀಜದ ಬಳಕೆ, ಸಸ್ಯಗಳ ಬೆಳವಣಿಗೆ ಹಾಗೂ ರಸಗೊಬ್ಬರ ಬಳಕೆಯ ಬಗ್ಗೆ ಮಾಹಿತಿ ನೀಡುತ್ತದೆ.
ಕೃಷಿ ಕೀಟ ಮುನ್ಸೂಚನೆ ಮತ್ತು ಸಲಹೆ ಆ್ಯಪ್: ಇದರಲ್ಲಿ ಕೀಟನಾಶಕ, ಶಿಲೀಂಧ್ರನಾಶಕದ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತದೆ.
| ಡಾ.ಕೆ.ಕರುಣಾ ಪ್ರಾಧ್ಯಾಪಕರು, ಸಸ್ಯರೋಗಶಾಸ್ತ್ರ