ನ್ಯೂಸ್

ಸಾವಯವ ಕೃಷಿ, ಮಿಶ್ರ ಬೆಳೆ; ಬಂಗಾರವಾಗಲಿದೆ ರೈತರ ಬಾಳ್ವೆ: ಇಂದು ಕೃಷಿನಿರತ ಮಹಿಳೆಯರ ದಿನ

ಮನುಕುಲದ ಉಳಿವಿಗೆ ಎಂದಿಗೂ ಅವಶ್ಯಕವಾದ ಆಹಾರ ಉತ್ಪಾದನೆಯಲ್ಲಿ ಪುರುಷರ ಜತೆಗೆ ಮಹಿಳಾ ರೈತರೂ ಹೆಗಲು ಜೋಡಿಸಿ ದುಡಿಯುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗ, ಅನ್ವೇಷಣೆ ಕೈಗೊಳ್ಳುತ್ತ ಸಾಧನೆಯ ಮಜಲುಗಳನ್ನು ಏರುತ್ತಿದ್ದಾರೆ. ಅವರ ಕೃಷಿಅನುಭವಗಳೇನು, ಇತರರು ಹೇಗೆ ಆ ಮಾದರಿಯನ್ನು ಅಳವಡಿಸಿಕೊಳ್ಳಬಹುದು ಎಂಬ ವಿಷಯಗಳ ಬಗ್ಗೆ ಸ್ವತಃ ಮೂವರು ಕೃಷಿ ಸಾಧಕಿಯರೇ ಕೃಷಿನಿರತ ಮಹಿಳೆಯರ ದಿನದ ಪ್ರಯುಕ್ತ ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಮಾಹಿತಿಯ ಬುತ್ತಿ ತೆರೆದಿಟ್ಟಿದ್ದಾರೆ.

ಯುವಕರು ಕೃಷಿಗೆ ಬರಬೇಕು

| ಕವಿತಾ ಮಿಶ್ರಾ

ಕೃಷಿಯಲ್ಲಿ ಬಿತ್ತುವುದರಿಂದ ಕಣದವರೆಗೆ ಮಹಿಳೆಯರೇ ಮುಂದಿರುತ್ತಾರೆ. ದುಡಿಯುವ ಗಂಡಸರಿಗೆ ಆಹಾರ ಸಿದ್ಧಪಡಿಸಲು ಎಲ್ಲರಿಗಿಂತ ಮೊದಲೇ ತಯಾರಿ ನಡೆಸುವುದು ಮಹಿಳೆಯರೇ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಹೊಣೆಯನ್ನು ಗಂಡಸರಿಗೆ ನೀಡಿಬಿಟ್ಟಿದ್ದೇವೆ, ಹಾಗಾಗಿ ಕೃಷಿ ಎನ್ನುವುದು ಪುರುಷ ಪ್ರಧಾನ ಎನ್ನುತ್ತಾರೆ. ಮೊದಲಿಗೆ ದಾಳಿಂಬೆಯನ್ನೇ ಬೆಳೆದೆ, ಉತ್ತಮ ಲಾಭ ಬಂತು. ಆದರೆ ರೋಗದಿಂದ ಬೆಳೆ ಹಾಳಾಯಿತು, ಸಾಲ ತೀರಿಸಲೂ ಹಣವಿಲ್ಲದಂತಾಯಿತು. ಋತು ಆಧಾರಿತ ಬೆಳೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡೆ. ಇದರಿಂದಾಗಿ ಬೇರೆ ಬೇರೆ ಋತುಗನುಗುಣವಾಗಿ ಆದಾಯ ಲಭಿಸುತ್ತದೆ.

ದೀರ್ಘಕಾಲಿಕ ಲಾಭಕ್ಕಾಗಿ ಶ್ರೀಗಂಧ ಹಾಕಿದೆ. ಈಗ ನನ್ನ ಜಮೀನಿನಲ್ಲಿ 2500 ಶ್ರೀಗಂಧ, 100 ಬೆಟ್ಟದ ನೆಲ್ಲಿ, 100 ನೇರಲೆ, 100 ತೆಂಗು, 800 ಸಾಗುವಾನಿ ಗಿಡ, ಕುರಿ, ಕೋಳಿ, ಜೇನು ಸಾಕಾಣಿಕೆ ಮುಂತಾದ ಅನೇಕ ವಿಧಾನಗಳ ಮೂಲಕ, ಸತತ 15 ವರ್ಷದ ಪರಿಶ್ರಮದಿಂದ ಕೃಷಿಯಲ್ಲಿ ಖಷಿ ಕಂಡುಕೊಂಡಿದ್ದೇನೆ.

ಬಹು ಬೆಳೆ ಪದ್ಧತಿಯಿಂದ ಪ್ರತಿ ಋತುವಿನಲ್ಲೂ ಹಣ ಲಭಿಸುತ್ತಿರುತ್ತದೆ. ಸಾವಿರ ಬಾರಿ ಮಣ್ಣಿನಲ್ಲಿ ಬಿದ್ದ ನಂತರ ಈ ಗೌರವ, ಮರ್ಯಾದೆ ಸಿಕ್ಕಿದೆ. ಎದೆಗುಂದದೆ ಶ್ರದ್ಧೆ, ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಜಗತ್ತಿನಲ್ಲಿ ಯಾರು ಕೈ ಹಿಡಿಯದಿದ್ದರೂ ಭೂಮಿತಾಯಿ ಕೈ ಹಿಡಿಯುತ್ತಾಳೆ.

ಗಂಧ ಏಕೆ ಆಯ್ಕೆ ಮಾಡಿಕೊಂಡಿರಿ?

-ಪ್ರಾರಂಭದಲ್ಲಿ ಶೇಂಗಾ, ಉಳ್ಳಾಗಡ್ಡಿ ಎಲ್ಲವನ್ನೂ ಬೆಳೆದರೂ ಖರ್ಚು ಕಳೆದು ನಾನೇ ಕೈಯಿಂದ ನೀಡಬೇಕಾಗುವ ಪರಿಸ್ಥಿತಿ ಇತ್ತು. ದಾಳಿಂಬೆಯನ್ನು 180 ರೂ.ಗೂ ಮಾರಿದ್ದೇನೆ, 10 ರೂ.ಗೆ ಕುಸಿದು ರಸ್ತೆಗೂ ಚೆಲ್ಲಿದ್ದೇನೆ. ಅದಕ್ಕೇ ಶ್ರೀಗಂಧವನ್ನು ಆಯ್ಕೆ ಮಾಡಿಕೊಂಡೆ. ಅದೊಂದು ಪರಾವಲಂಬಿ ಗಿಡ. ದಾಳಿಂಬೆ, ಮಾವು ಮುಂತಾವುಗಳಿಂದ ದಿನನಿತ್ಯದ ಜೀವನ ನಡೆದರೆ, ವಯಸ್ಸಾದ ಕಾಲದಲ್ಲಿ ಶ್ರೀಗಂಧದಿಂದ ಒಂದು ದೊಡ್ಡ ಮೊತ್ತ ಸಿಗುತ್ತದೆ.

ಗಂಧ, ಸಾಗುವನಿ ಮರಗಳ ರಕ್ಷಣೆ ಹೇಗೆ?

-ಶ್ರೀಗಂಧದಲ್ಲಿ ತೈಲ ಪ್ರಮಾಣಕ್ಕೆ ಬೆಲೆ ಇರುತ್ತದೆ. ಕಳ್ಳರ ಸಮಸ್ಯೆ ಇದ್ದೇ ಇದೆ. ಶ್ರೀಗಂಧ ಬೆಳೆಯುವ ಮುನ್ನ, ಮುಳ್ಳಿನ ಬಿದಿರು ಹಾಕಿ ಬೇಲಿಯನ್ನು ಭದ್ರ ಮಾಡಿಕೊಳ್ಳ ಬಹುದು, ಇನ್ನೂ ಅನೇಕ ವಿಧಾನ ಅನುಸರಿಸಬಹುದು. ಕೆಟ್ಟ ಅಂಶಗಳ ಬಗ್ಗೆ ಯೋಚಿಸುವ ಬದಲು ಉತ್ತಮ ಅಂಶಗಳ ಬಗ್ಗೆ ಆಲೋಚಿಸಿ, ರೈತರು ಸದೃಢವಾಗಬೇಕು. ಶ್ರೀಗಂಧಕ್ಕೆ ಸರ್ಕಾರ ವಿಮಾ ರಕ್ಷಣೆ ಒದಗಿಸಿದಲ್ಲಿ ರೈತ ಕೋಟ್ಯಧಿಪತಿ ಆಗುವುದರಲ್ಲಿ ಸಂಶಯವಿಲ್ಲ.

ಕೃಷಿ ಉತ್ಪನ್ನ ಮಾರಾಟದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಹೇಗೆ?

-ಕಚ್ಚಾ ಉತ್ಪನ್ನವನ್ನು ಮಾರಿದಾಗ ಬೆಲೆ ಕಡಿಮೆ ಸಿಗುತ್ತದೆ. ತೊಗರಿಯನ್ನು ಹಾಗೆಯೇ ಮಾರುವುದಕ್ಕಿಂತಲೂ ಬೇಳೆ ಮಾಡಿ ಮಾರಿದರೆ ಹೆಚ್ಚು ಹಣ ಸಿಗುತ್ತದೆ. ಸಾವಯವಕ್ಕೆ ಹೆಚ್ಚು ಬೆಲೆ ಇದೆ.

ಪದವಿ ಪಡೆದ ಅನೇಕ ಮಹಿಳೆಯರಿಗೆ ಕೃಷಿಯತ್ತ ಒಲವಿಲ್ಲ, ಏಕೆ?

-ವಿದ್ಯಾವಂತರು ಕೃಷಿಗೆ ಬರಬೇಕು ಎನ್ನುವುದು ನನ್ನ ಅಭಿಲಾಷೆ. ಅವರು ಬಂದರೆ ಸ್ಮಾರ್ಟ್ ಅಗ್ರಿಕಲ್ಚರ್ ಆಗುತ್ತದೆ. ಯೋಜಿತವಾಗಿ ಕೃಷಿ ಮಾಡಿದರೆ ಮನಸ್ಸಿಗೆ ನೆಮ್ಮದಿ ಹಾಗೂ ಲಾಭವನ್ನೂ ಪಡೆಯಬಹುದು.

ಬೆಳೆಗಳ ರೋಗ ಹೋಗಲಾಡಿಸಲು ರಾಸಾಯನಿಕದ ಹೊರತಾಗಿ ಏನು ಮಾಡಬಹುದು?

-1 ಡ್ರಂನಲ್ಲಿ ಹುಳಿಮಜ್ಜಿಗೆ, ಬೆಳ್ಳುಳ್ಳಿ, ನಾಟಿ ಹಸುವಿನ ಗಂಜಲ, ಈರುಳ್ಳಿ ಮುಂತಾವುಗಳನ್ನು ಬಳಸಿ, ಕೊಳೆಸಿ ಜೀವಾಮೃತ ಸಿದ್ಧಪಡಿಸಲಾಗುತ್ತದೆ. ಇದನ್ನು 3 ಬಾರಿ ಸಿಂಪಡಿಸಿದರೆ ಯಾವ ಕೀಟವೂ ಬರುವುದಿಲ್ಲ. ರಾಸಾಯನಿಕ ಬೇಕಾಗಿಲ್ಲ.

ಗಂಧದ ಕೊಂಬೆ ಕತ್ತರಿಸುವುದು ಯಾವಾಗ?

-ಗಿಡ ಏಳು ಅಡಿ ಎತ್ತರ ಇದೆ ಎಂದರೆ, ಅದರಲ್ಲಿ ವಿ ಆಕಾರದ ಕೊಂಬೆಗಳು ಇದ್ದರೆ, ದಪ್ಪ ಇರುವುದನ್ನು ಬಿಟ್ಟು ತೆಳ್ಳಗಿರುವುದನ್ನು ತುಂಡರಿಸಿ. ಮುಖ್ಯಕಾಂಡವನ್ನು ಸಾಕಷ್ಟು ಬಿಟ್ಟು ಕತ್ತರಿಸಬೇಕು. ಹೆಚ್ಚು ನೀರು ನೀಡಿದರೆ ಹಾಗೂ ನೆರಳು ಹೆಚ್ಚಾದರೆ ತೈಲದ ಪ್ರಮಾಣ ಕಡಿಮೆ ಆಗಿ, ಗುಣಮಟ್ಟ ಕಳೆದುಕೊಳ್ಳುತ್ತದೆ. ಕಾಪರ್ ಆಕ್ಸಿ ಕ್ಲೋರೈಡ್ ಸಿಂಪಡಿಸಿ. ಹಿಂಡಿ ಗೊಬ್ಬರ ನೀಡಿ.

ಕೋವಿಡ್ ನಂತರ ಅನೇಕರು ಕೃಷಿಯತ್ತ ಆಸಕ್ತಿ ವಹಿಸಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆಯೇ?

-ನನಗೆ ಪ್ರತಿದಿನ ಅಸಂಖ್ಯ ಕರೆಗಳು ಬರುತ್ತಿವೆ, ಇದರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಕೆಲಸದ ಜಾಗದಲ್ಲಿ ಅವಮಾನ ಸಹಿಸಲಾಗುತ್ತಿಲ್ಲ, ಜಮೀನು ಕೆಲಸ ಮಾಡಬೇಕು ಎಂದು ಕೇಳುತ್ತಿದ್ದಾರೆ. ಅವರಿಗೆ ನಾನು ಹೇಳುವುದೆಂದರೆ, ಕೃಷಿ ಮಾಡುವುದು ಫೇಸ್​ಬುಕ್, ಯೂಟ್ಯೂಬ್​ನಲ್ಲಿ ನೋಡಿದಷ್ಟೆ ಸುಲಭ ಎಂದು ತಿಳಿಯಬಾರದು. ಅದು ತಪಸ್ಸಿನ ರೀತಿ.

ಭೂಮಿಯೇ ವ್ಯವಸಾಯ ಕಲಿಸುತ್ತದೆ

| ವಿ. ಬಿ. ಮಂಜುಳಾ

ಕೃಷಿ ಎಂದರೆ ಖುಷಿಯಿಂದ ಮಾಡಬೇಕು. ಅದೊಂದು ಮಗುವಿನ ರೀತಿ. ಕೆಲಸಕ್ಕಾಗಿ ಕೆಲಸ ಮಾಡದೆ ಪ್ರೀತಿಯಿಂದ ಮಾಡಬೇಕು ಎಂದು ತಂದೆ ಹೇಳಿಕೊಟ್ಟಿದ್ದರು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದವರನ್ನೆ ವಿವಾಹವಾದೆ. ಜೋಡೆತ್ತುಗಳ ರೀತಿಯಲ್ಲಿ ಇಬ್ಬರೂ ಈಗ ದುಡಿಯುತ್ತಿದ್ದೇವೆ. 25 ತಳಿ ನಾಟಿ ಭತ್ತ ಬೆಳೆಯುತ್ತಿದ್ದೇವೆ. ಒಂದೆರಡು ವರ್ಷ ಮಳೆ ಇಲ್ಲದಾಗ ಸಿರಿಧಾನ್ಯ ಬೆಳೆದವು. ಅದು ಜಿಲ್ಲೆಯಲ್ಲಿ ಹೆಸರುವಾಸಿಯಾಯಿತು. ಸೀಮೆ ಹಸುಗಳು, ನಾಟಿ ಹಸುಗಳು, ಕುರಿಗಳನ್ನು ಸಾಕಿದ್ದೇವೆ. ನಾಟಿ ಹಸುವಿನ ತುಪ್ಪಕ್ಕೆ ಬಹು ಬೇಡಿಕೆ ಇದೆ. ಇದರ ಜತೆಗೆ ಹಪ್ಪಳ, ಬೆಲ್ಲ, ಹುರಿಟ್ಟು ಮುಂತಾದ ಉತ್ಪನ್ನಗಳ ತಯಾರಿಕೆ ಸಲುವಾಗಿ 20-25 ಮಹಿಳೆಯರಿಗೆ ಉದ್ಯೋಗ ನೀಡಲಾಗಿದೆ. ಕೋಳಿಮೊಟ್ಟೆಯಿಂದಲೇ ದಿನಕ್ಕೆ 400-500 ರೂ. ಲಭಿಸುತ್ತದೆ. ವ್ಯವಸಾಯವನ್ನು ಕ್ರಮಬದ್ಧವಾಗಿ ಮಾಡಬೇಕು. ಈಗ ಪ್ರತಿದಿನ ಎರಡೂವರೆ ಸಾವಿರ ರೂ.ನಷ್ಟು ಆದಾಯ ಲಭಿಸುತ್ತದೆ.

ವಿದ್ಯಾವಂತರಿಂದ ಮಾತ್ರವೇ ಕೃಷಿ ಸಾಧ್ಯವೇ?

-ವಿದ್ಯೆಯನ್ನು ಅಲ್ಲಗಳೆಯಬಾರದು, ವಿದ್ಯೆ ಕಲಿಯಬೇಕು. ವಿದ್ಯೆ ತಿಳಿದಿದ್ದರೆ ವಿವಿಧೆಡೆ ಸುದ್ದಿಗಳನ್ನು ಓದಿ ಉತ್ತಮ ಕೃಷಿ ಮಾಡಬಹುದು. ಆದರೆ ವಿದ್ಯೆ ಇಲ್ಲದಿರುವುದು ಕೊರತೆ ಅಲ್ಲ. ಭೂಮಿಗೆ ಇಳಿದರೆ ಭೂಮಿಯೇ ವ್ಯವಸಾಯವನ್ನು ಕಲಿಸುತ್ತದೆ. ಪ್ರೀತಿ ಇದ್ದರೆ ಸಾಕು, ಎಲ್ಲವನ್ನೂ ಭೂಮಿಯೇ ಮಾಡಿಸುತ್ತದೆ.

ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಆಸಕ್ತಿ ತೋರದಿರಲು ಕಾರಣ ಏನು ಇರಬಹುದು?

-ಅನೇಕರಿಗೆ ತಮ್ಮ ಕೈ ಕೆಸರಾಗಬಾರದು ಎಂಬ ಮನಸ್ಥಿತಿ ಇದೆ. ಗಂಡ ಕಟ್ಟಿಕೊಂಡಿದ್ದಾನೆ, ಅವನು ದುಡಿದು ತಂದು ಹಾಕಲಿ ಎಂಬ ಮನೋಭಾವನೆ ಬಿಟ್ಟಾಗ ಮಾತ್ರ ಸಾಧನೆ ಮಾಡಬಹುದು. ಬೇರೆಯವರನ್ನು ನೋಡಿ ಅದೇ ಬೇಕೆನ್ನುವ ಆಸೆಯನ್ನು ಬಿಡಬೇಕು. ಮಹಿಳೆಯರು ಆಸೆಗೆ ಕಡಿವಾಣ ಹಾಕಬೇಕು.

ಮಹಿಳೆಯರಿಗೆ ಸರಿಯಾದ ಕೂಲಿ ಸಿಗುತ್ತಿಲ್ಲ, ಇದಕ್ಕೆ ಪರಿಹಾರ ಏನು?

-ಕೂಲಿಕಾರ್ವಿುಕರಿಗೆ ಕೂಲಿ ಕಡಿಮೆ ಇದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕಾರ್ಯ ಮಾಡಿ ನಮ್ಮ ಆದಾಯವನ್ನು ಹೆಚ್ಚಿಸಿಕೊಂಡಾಗ ಕಾರ್ವಿುಕರಿಗೆ ಹೆಚ್ಚಿನ ಕೂಲಿ ನೀಡಬಹುದು. ಅದೇ ಪರಿಹಾರ.

ಇಚ್ಛಾಶಕ್ತಿ ಮುಖ್ಯ...

| ಲೀಲಾವತಿ

ನಮ್ಮ ಮೂರು ಎಕರೆ ಜಮೀನಿನಲ್ಲಿ ಟ್ರಾ್ಯಕ್ಟರ್ ಇಲ್ಲದೆ ಕೃಷಿ ಮಾಡುತ್ತಿದ್ದೇವೆ. ರಾಗಿ, ನವಣೆ, ಸಾಮೆ, ಊದಲು, ಅರ್ಕ ಮುಂತಾದ ಸಿರಿಧಾನ್ಯಗಳನ್ನು ಮನೆಗೆ ಬೆಳೆದುಕೊಂಡೆವು. ಕಳೆಯನ್ನು ಕಡಿಮೆ ಮಾಡುವ ಹಾಗೂ ಜೀವಾಮೃತ ಮಾಡುವ ಮೂಲಕ ಹೆಚ್ಚು ಇಳುವರಿಯನ್ನು ಈಗ ಪಡೆಯುತ್ತಿದ್ದೇವೆ. ಜೀವಾಮೃತವನ್ನು ಹೊಲಕ್ಕೆಲ್ಲ ಎರಚುತ್ತೇವೆ. ಕಾಳು ಮೆಣಸು, ಅಡಕೆ, ತೆಂಗು, ಬಾಳೆ ಮುಂತಾದವು ಜೀವಾಮೃತ ಹಾಗೂ ಹಸುವಿನ ಗೊಬ್ಬರದಿಂದಲೇ ಬೆಳೆಯುತ್ತೇವೆ. ಮೊದಲೆಲ್ಲ ಪ್ರತಿ ವರ್ಷಕ್ಕೆ ಒಂದು ಲಕ್ಷ ರೂ.ನಷ್ಟು ಸಿಗುತ್ತಿತ್ತು, ಈಗ 2-3 ಲಕ್ಷ ರೂ. ಸಿಗುತ್ತಿದೆ.

ಸಾಧಕಿಯರ ಪರಿಚಯ

  • ಕವಿತಾ ಮಿಶ್ರಾ: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳದ ಕೃಷಿಕ ಮಹಿಳೆ. ಓದಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ, ಸೈಕಾಲಜಿಯಲ್ಲಿ ಎಂಎ. ಆದರೆ, ಜೀವನದಲ್ಲಿ ಸಾಧಿಸಬೇಕು ಎನ್ನುವ ಛಲದೊಂದಿಗೆ ಎಂಟು ಎಕರೆ ಬರಡು ಭೂಮಿಯಲ್ಲಿ ಕೃಷಿ ನಡೆಸುವ ಮೂಲಕ ವರ್ಷಕ್ಕೆ ಲಕ್ಷಾಂತರ ರೂಪಾಯಿ ಲಾಭವನ್ನು ಅವರೀಗ ಪಡೆಯುತ್ತಿದ್ದಾರೆ.
  • ವಿ.ಬಿ.ಮಂಜುಳಾ: ಮೂಲತಃ ರೈತ ಕುಟುಂಬದಲ್ಲಿ ಜನಿಸಿದವರು. 2004ರಲ್ಲಿ ಮದ್ದೂರು ತಾಲೂಕು ಗೂಳೂರುದೊಡ್ಡಿ ಗ್ರಾಮದ ಸಾವಯವ ಕೃಷಿಕ ಕೃಷ್ಣ ಅವರನ್ನು ವಿವಾಹವಾದರು. ನಂತರ ಪತಿಗೆ ಸಂಸಾರ ನಿರ್ವಹಣೆಯ ಜತೆಗೆ ಕೃಷಿಗೂ ಹೆಗಲು ಕೊಟ್ಟರು. ಮಂಜುಳಾ ಅವರು ಸುಮಾರು 35 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ.
  • ಲೀಲಾವತಿ: ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿಯವರು. ಸಂಪೂರ್ಣ ಸಾವಯವ ಕೃಷಿಯನ್ನೇ ಅಳವಡಿಸಿಕೊಂಡಿದ್ದಾರೆ. ಮಳೆನೀರು ಸಂಗ್ರಹಣೆ ಕೂಡ ಇವರ ವಿಶೇಷತೆ. ಜಮೀನಿನ ಅಲ್ಲಲ್ಲಿ ಮೂರ್ನಾಲ್ಕು ಕಡೆ ಇಂಗು ಗುಂಡಿ, ಕೃಷಿ ಹೊಂಡ ತೆಗೆಸಿದ್ದಾರೆ.

ರೈತಮಹಿಳೆ ಅಗೋಚರ ಶಕ್ತಿ

| ಡಾ.ಕೆ. ಪಿ. ರಘುಪ್ರಸಾದ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಪ್ರತಿವರ್ಷ ಡಿಸೆಂಬರ್ 4ರಂದು ‘ಕೃಷಿನಿರತ ಮಹಿಳಾ ದಿನ’ವನ್ನು ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ. ಈ ದಿನಾಚರಣೆಯ ಒಟ್ಟಾರೆ ಉದ್ದೇಶ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹಾಗೂ ಕೃಷಿ ಉತ್ಪಾದನೆಯಲ್ಲಿ ಗ್ರಾಮೀಣ ಮಹಿಳೆಯರ ಕೊಡುಗೆಯನ್ನು ಗುರುತಿಸಿ ಭವಿಷ್ಯದ ಕೃಷಿಯಲ್ಲಿ ಮಹಿಳೆಯರ ಸ್ಥಾನಮಾನವನ್ನು ಸುಸ್ಥಿರಗೊಳಿಸುವುದೇ ಆಗಿದೆ. ಕೆಲವು ಅಂಕಿ ಅಂಶಗಳ ಪ್ರಕಾರ ಒಟ್ಟು ರಾಷ್ಟ್ರದ ಜನಸಂಖ್ಯೆಯ ಶೇ.48.04 ರಷ್ಟಿರುವ ಮಹಿಳೆಯರಲ್ಲಿ (ಜಾಗತಿಕ ಶೇ. 49.58) ಶೇ.60 ಪ್ರತಿಶತ ಕೃಷಿ ಕ್ಷೇತ್ರದ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮೀಣ ಮಹಿಳೆಯರ ಪೈಕಿ ಶೇ.80ರಷ್ಟು ಮಹಿಳೆಯರು ಜೀವನೋಪಾಯಕ್ಕಾಗಿ ಕೃಷಿ ಕ್ಷೇತ್ರದ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಇದರಲ್ಲಿ ಪ್ರತಿಶತ 30ರಷ್ಟು ಗ್ರಾಮೀಣ ಮಹಿಳೆಯರು ನೇರವಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಶೇ.45ಕ್ಕಿಂತ ಹೆಚ್ಚು ಮಹಿಳೆಯರು ಕೃಷಿ ಕಾರ್ವಿುಕರಾಗಿದ್ದಾರೆ. ಶೇ. 13ರಷ್ಟು ಕೃಷಿ ಮಹಿಳೆಯರು ಮಾತ್ರ ಜಮೀನುಗಳ ಮಾಲಿಕತ್ವ ಹೊಂದಿದ್ದಾರೆ. ಬಹಳಷ್ಟು ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರು ಪರೋಕ್ಷವಾಗಿ ಪಾಲ್ಗೊಳ್ಳುತ್ತಿದ್ದರೂ ಅಗೋಚರ ಶಕ್ತಿಯಾಗಿಯೇ ಉಳಿದಿದ್ದು ಇವರಿಗೆ ನಿಜವಾಗಿ ಸಿಗಬೇಕಾದ ಪಾತಿನಿಧ್ಯ ಸಿಗುತ್ತಿಲ್ಲ. ಅದರಲ್ಲೂ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಯುವಕರ ಪಟ್ಟಣದತ್ತ ಹೆಚ್ಚುತ್ತಿರುವ ವಲಸೆಯಿಂದ ಕೃಷಿಕ್ಷೇತ್ರದ ಹೆಚ್ಚಿನ ಜವಾಬ್ದಾರಿ ಮಹಿಳೆಯರ ಮೇಲೆ ಬೀಳುತ್ತಿದೆ. ಆದರೂ ಈ ಗ್ರಾಮೀಣ ಮಹಿಳೆಯರ ಗುಣಾತ್ಮಕ ಕಾಲ (ದಿನಕ್ಕೆ ನಾಲ್ಕು ಗಂಟೆ) ಯಾವುದೇ ಕೂಲಿ/ಸಂಬಳವಿಲ್ಲದೆ ದುಡಿಯುವ ಕೆಲಸವಾಗಿರುತ್ತದೆ. ಹಾಗಾಗಿ ಕೇವಲ ಕೃಷಿ ಕ್ಷೇತ್ರದ ಚಿಕ್ಕಪುಟ್ಟ ಕೆಲಸಗಳಿಂದ ಹೊರಬಂದು ಕೃಷಿ ನವೋದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಕೊಯ್ಲೋತ್ತರ ಕೃಷಿಯಲ್ಲಿ ರೈತ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ.