ನ್ಯೂಸ್

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಪ್ರವಾಹದಲ್ಲಿ 20 ಕಾರ್ಮಿಕರು ಕೊಚ್ಚಿ ಹೋಗಿರುವ ಶಂಕೆ! | CloudBurst

CloudBurst: ಮಾನ್ಸೂನ್ ಹಿನ್ನೆಲೆ ದೇಶಾದ್ಯಂತ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬುಧವಾರ ಹಿಮಾಚಲ ಪ್ರದೇಶದ ಕುಲುವಿನಲ್ಲೂ ಅತೀ ಹೆಚ್ಚು ಮಳೆಯಾಗಿದೆ. ಪರಿಣಾಮ ಕುಲುವಿನಲ್ಲಿ ಮೇಘಸ್ಫೋಟ ಉಂಟಾಗಿದ್ದು, ಸೈಂಜ್ ವ್ಯಾಲಿಯಲ್ಲಿ ದಿಢೀರ್ ಪ್ರವಾಹ ಸಂಭವಿಸಿದೆ.

ಇಲ್ಲಿ ಜಲವಿದ್ಯುತ್ ಯೋಜನೆಯ ಬಳಿಯ ಕಂದರದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ 15 ರಿಂದ 20 ಕಾರ್ಮಿಕರು ಕೊಚ್ಚಿಹೋಗಿದ್ದಾರೆ. ಧರ್ಮಶಾಲಾದ ಬಿಜೆಪಿ ಶಾಸಕ ಸುಧೀರ್ ಶರ್ಮಾ ಇದನ್ನು ದೃಢಪಡಿಸಿದ್ದಾರೆ. ಇಲ್ಲಿಯವರೆಗೆ, ಎರಡು ಶವಗಳನ್ನು ಹೊರತೆಗೆಯಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಧರ್ಮಶಾಲೆಯ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಹೈಡ್ರಾಲಿಕ್ ಯೋಜನೆಯ ಮನುನಿ ಖಡ್‌ನಲ್ಲಿ ನೀರಿನ ಹರಿವಿನ ಹಠಾತ್ ಹೆಚ್ಚಳದಿಂದಾಗಿ ಸುಮಾರು 15 ರಿಂದ 20 ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ಅವರೆಲ್ಲರೂ ಕಂದರದ ದಡದಲ್ಲಿ ನಿರ್ಮಿಸಲಾದ ಶೆಡ್‌ನಲ್ಲಿ ವಾಸಿಸುತ್ತಿದ್ದರು. ಚಂಬಾದ ಕೆಲಸಗಾರ ಧರ್ಮೇಂದ್ರ ಅವರು ಈ ಘಟನೆ ಮಧ್ಯಾಹ್ನ ವಿದ್ಯುತ್ ಕೇಂದ್ರದ ಸೇತುವೆ ಸಂಖ್ಯೆ ಒಂದರ ಬಳಿ ಸಂಭವಿಸಿದೆ ಎಂದು ಹೇಳಿದ್ದಾರೆ.

ಹಠಾತ್ತನೆ ಕಂದರದಲ್ಲಿ ನೀರು ಏರಿ ಶೆಡ್‌ನಲ್ಲಿದ್ದ ಜನರು ಕೊಚ್ಚಿ ಹೋದರು ಎಂದು ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಪರ್ವೇಜ್ ಮೊಹಮ್ಮದ್ ಹೇಳಿದ್ದಾರೆ. ಕಾರ್ಮಿಕನು ಮೃತ ದೇಹವನ್ನು ನೋಡಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಒಂದು ಕಾರು ಕೊಚ್ಚಿ ಹೋಗಿದೆ ಎಂದು ಹೇಳಿದ್ದಾನೆ ಎಂದು ವರದಿ ಉಲ್ಲೇಖಿಸಿದ್ದಾನೆ.(ಏಜೆನ್ಸೀಸ್​)