ನ್ಯೂಸ್

ಕಿಶ್ತ್ವಾರ್‌ನಲ್ಲಿ ಮೇಘಸ್ಫೋಟ: 44 ಕ್ಕೇರಿದ ಸಾವಿನ ಸಂಖ್ಯೆ, 167 ಜನರ ರಕ್ಷಣೆ!

ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನ ಚೋಸಿತಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭಾರಿ ಮೇಘಸ್ಫೋಟ ಹಿನ್ನೆಲೆ ಇಬ್ಬರು ಸಿಐಎಸ್‌ಎಫ್ ಜವಾನರು ಸೇರಿದಂತೆ 44 ಜನರು ಮೃತಪಟ್ಟಿದ್ದು, 200 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

120ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 167 ಜನರನ್ನು ರಕ್ಷಣೆ ಮಾಡಲಾಗಿದೆ. ಏಕಾಏಕಿ ದೊಡ್ಡ ಪ್ರಮಾಣದ ವಿಕೋಪ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಮೇಘಸ್ಪೋಟ ಇದಾಗಿದ್ದು, ರಕ್ಷಣಾ ತಂಡಗಳು ಬದುಕುಳಿದವರನ್ನು ರಕ್ಷಣೆ ಮಾಡುವಲ್ಲಿ ಕಾರ್ಯನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಚೈಲ್ ಮಾತಾ ಯಾತ್ರೆಯು ಹಿಮಾಲಯದ ಮಾತಾ ಚಂಡಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ತೀರ್ಥಯಾತ್ರೆಯ ಹಾದಿ ಅಸ್ತವ್ಯಸ್ತವಾಗಿದೆ.

ಕಿಶ್ತ್ವಾರ್ ಪ್ರದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. (ಏಜೆನ್ಸೀಸ್​)