

ಜಮ್ಮು-ಕಾಶ್ಮೀರದ ಕಿಶ್ತ್ವಾರ್ನ ಚೋಸಿತಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭಾರಿ ಮೇಘಸ್ಫೋಟ ಹಿನ್ನೆಲೆ ಇಬ್ಬರು ಸಿಐಎಸ್ಎಫ್ ಜವಾನರು ಸೇರಿದಂತೆ 33 ಜನರು ಮೃತಪಟ್ಟಿದ್ದು, 200 ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
120ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಏಕಾಏಕಿ ದೊಡ್ಡ ಪ್ರಮಾಣದ ವಿಕೋಪ ಸಂಭವಿಸಿದೆ. ಭಾರೀ ಪ್ರಮಾಣದಲ್ಲಿ ಮೇಘಸ್ಪೋಟ ಇದಾಗಿದ್ದು, ರಕ್ಷಣಾ ತಂಡಗಳು ಬದುಕುಳಿದವರನ್ನು ರಕ್ಷಣೆ ಮಾಡುವಲ್ಲಿ ಕಾರ್ಯನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಚೈಲ್ ಮಾತಾ ಯಾತ್ರೆಯು ಹಿಮಾಲಯದ ಮಾತಾ ಚಂಡಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ತೀರ್ಥಯಾತ್ರೆಯ ಹಾದಿ ಅಸ್ತವ್ಯಸ್ತವಾಗಿದೆ.
ಕಿಶ್ತ್ವಾರ್ ಪ್ರದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಮೇಘಸ್ಫೋಟ ಪೀಡಿತ ಪ್ರದೇಶದಿಂದ ದೃಢಪಡಿಸಿದ ಮಾಹಿತಿ ನಿಧಾನವಾಗಿ ಬರುತ್ತಿದೆ. ಆದರೆ, ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಅದರಾಚೆಗೆ ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಸಿಎಂ ಒಮರ್ ಹೇಳಿದ್ದಾರೆ.(ಏಜೆನ್ಸೀಸ್)