ನ್ಯೂಸ್

ಸಮಸ್ಯೆ ಬಗೆಹರಿಸಿ | ಸಂಪಾದಕೀಯ

ಮೋಹನ್​ ಶೆಟ್ಟಿ

ದೇಶದಲ್ಲಿರುವ ವಕ್ಛ್ ಮಂಡಳಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತಂದಿರುವ ಮಸೂದೆ ಕುರಿತು ರ್ಚಚಿಸುವುದಕ್ಕಾಗಿ ರಚಿಸಿರುವ ಸಂಸದೀಯ ಸಮಿತಿ ಸಭೆಯಿಂದ ವಿರೋಧ ಪಕ್ಷಗಳು ಸೋಮವಾರವೂ ಹೊರನಡೆದಿರುವುದು ವಿಪರ್ಯಾಸಕರ ಬೆಳವಣಿಗೆ. ಪ್ರತಿಪಕ್ಷಗಳ ನಾಯಕರಿಂದ ಇಂಥ ವರ್ತನೆ ಇದೇ ಮೊದಲೇನಲ್ಲ. ಕಳೆದ ಕೆಲವು ವಾರಗಳಲ್ಲಿ ಹಲವು ಬಾರಿ ಸಭಾತ್ಯಾಗ ಮಾಡಿರುವುದನ್ನು ನೋಡಿದರೆ, ನಿಜಕ್ಕೂ ಪ್ರತಿಪಕ್ಷಗಳು ಮಸೂದೆಯ ಬಗ್ಗೆ ಗಂಭೀರವಾಗಿ ಇವೆಯೇ ಎಂಬ ಪ್ರಶ್ನೆ ಮೂಡದಿರಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ತೃಣಮೂಲ ಕಾಂಗ್ರೆಸ್​ನ (ಟಿಎಂಸಿ) ಸದಸ್ಯರೊಬ್ಬರು ಸಂಸದೀಯ ಸಮಿತಿಯ ಸಭೆಯಲ್ಲೇ ಗಾಜಿನ ಬಾಟಲಿಯನ್ನು ಒಡೆದು ಅಧ್ಯಕ್ಷರತ್ತ ತೂರುವ ಪ್ರಯತ್ನ ನಡೆಸಿದ್ದು ಕೂಡ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಈ ಘಟನೆ ಆತಂಕವನ್ನು ಸೃಷ್ಟಿಸಿತ್ತು.

ಸಂಸದೀಯ ಪ್ರಜಾಪ್ರಭುತ್ವದ ಆಶಯಗಳಿಗೆ ಮಣಿದು ಕೇಂದ್ರ ಸರ್ಕಾರ ಈ ಸಮಿತಿಯನ್ನು ರಚಿಸಿದೆ ಎಂಬುದು ಗಮನಾರ್ಹ. ಇದರ ಉದ್ದೇಶ ಈಡೇರಿಕೆಯ ದಿಸೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆಸಬೇಕೇ ಹೊರತು, ಸಮಿತಿಯ ರಚನೆಯನ್ನೇ ಅಪ್ರಸ್ತುತಗೊಳಿಸುವಂತೆ ಅಸಹಕಾರ ತೋರುವುದು ವಿರೋಧ ಪಕ್ಷಗಳ ನಾಯಕರಿಗೆ ಶೋಭೆ ತರುವುದಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಪ್ರಸ್ತುತ 32 ವಕ್ಛ್ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಇವು ವಕ್ಛ್ ಜಮೀನು/ ಸಂಪತ್ತುಗಳ ರಿಜಿಸ್ಟ್ರೇಶನ್ ಮಾಡಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿವೆ. ದೇಶದಲ್ಲಿ ರೈಲ್ವೆ ಇಲಾಖೆ ಮತ್ತು ರಕ್ಷಣಾ ಸಚಿವಾಲಯದ ಬಳಿಕ ಅತಿ ಹೆಚ್ಚು ಭೂಮಿಯನ್ನು ಹೊಂದಿರುವುದು ವಕ್ಛ್ ಮಂಡಳಿಯೇ.

ಮತ್ತೊಂದೆಡೆ, ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆ ಭೂಮಿಯು ವಕ್ಛ್ ಮಂಡಳಿಗೆ ಸೇರಿದ್ದು ಎಂದು ತೀರ್ವನಿಸಿ, ಸಂಬಂಧಿಸಿದ ರೈತರಿಗೆ ಕಂದಾಯ ಇಲಾಖೆಯಿಂದ ನೋಟಿಸ್ ಕೊಟ್ಟಿರುವುದು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಒಳಗಾಗುತ್ತಿರುವ ವಿಷಯವಾಗಿದೆ. ತಲೆತಲಾಂತರಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡಿರುವ ರೈತರು ಈ ನೋಟಿಸ್​ನಿಂದ ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ, ಇಂಥ ನಿರ್ಧಾರ ಏಕೆ ಕೈಗೊಳ್ಳಲಾಯಿತು ಎಂದು ತಿಳಿಯದೆ ಮುಂದೇನು ಗತಿ ಎಂದು ಚಿಂತಾಕ್ರಾಂತರಾಗಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಕೃಷಿಭೂಮಿಯನ್ನು ಈಗ ಏಕಾಏಕಿ ವಕ್ಛ್ ಮಂಡಳಿ ಆಸ್ತಿಯೆಂದು ಘೋಷಿಸಿದರೆ ರೈತರ ಪಾಡೇನು?

ಈ ಸಮಸ್ಯೆ ವಿಜಯಪುರ ಜಿಲ್ಲೆಗೆ ಸೀಮಿತವಾಗಿಲ್ಲ. ಇದೇ ರೀತಿಯ ಸಮಸ್ಯೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಆಗಿರುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಟಾಸ್ಕ್​ಫೋರ್ಸ್ ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆಯಾದರೂ, ಅದಕ್ಕೆ ಕಾಲಮಿತಿ ನಿಗದಿಪಡಿಸಿಲ್ಲ. ಸಮಸ್ಯೆಯನ್ನು ದೀರ್ಘಕಾಲ ಮುಂದುವರಿಯಲು ಬಿಡದೇ ಸರ್ಕಾರ ಕೂಡಲೇ ಇತ್ಯರ್ಥಪಡಿಸಲು ಮುಂದಾಗಬೇಕು.