ಗುರ್ಗಾಂವ್‌ನಲ್ಲಿ 2,435 ಕೆಜಿ ಕಸ ತೆರವುಗೊಳಿಸಿದ ಬಿಟ್ಟು ತಬಾಹಿ ತಂಡ 
ನ್ಯೂಸ್

ಕಸ ಕಂಡ್ರೆ ಸಾಕು, ಕ್ಲೀನ್ ಮಾಡೋದೇ ಕೆಲಸ; ಗುರ್ಗಾಂವ್‌ನಲ್ಲಿ 2,435 ಕೆಜಿ ತ್ಯಾಜ್ಯ ತೆರವು ಮಾಡಿದ ‘ಬಿಟ್ಟು ತಬಾಹಿ’! | Bittu Tabahi

ಮಧ್ಯಪ್ರದೇಶದಿಂದ ಶುರುವಾದ ‘ಬಿಟ್ಟು ತಬಾಹಿ’ ಅವರ ಸ್ವಚ್ಛತಾ ಅಭಿಯಾನ ಇದೀಗ ದೆಹಲಿ-ಎನ್‌ಸಿಆರ್‌ಗೂ ತಲುಪಿದೆ. ಗುರ್ಗಾಂವ್‌ನಲ್ಲಿ ಬರೋಬ್ಬರಿ 2,435 ಕೆಜಿ ಕಸ ತೆರವುಗೊಳಿಸಿರುವ ತಂಡ, ಬಳಿಕ ನೋಯ್ಡಾದಲ್ಲೂ ಸ್ವಚ್ಛತಾ ಕಾರ್ಯ ಮುಂದುವರಿಸಿದೆ.

Bittu Tabahi Gurugram: ಮಧ್ಯಪ್ರದೇಶದಲ್ಲಿ ನದಿ ಸ್ವಚ್ಛತಾ ಕೆಲಸದ ಮೂಲಕ ಗಮನ ಸೆಳೆದಿರುವ ಸುರೇಂದ್ರ ಸಿಂಗ್ ಚೌಧರಿ ಅಲಿಯಾಸ್ ‘ಬಿಟ್ಟು ತಬಾಹಿ’ ಇದೀಗ ತಮ್ಮ ಅಭಿಯಾನವನ್ನು ದೆಹಲಿ-ಎನ್‌ಸಿಆರ್‌ಗೂ ವಿಸ್ತರಿಸಿದ್ದಾರೆ.

ಸೆಪ್ಟೆಂಬರ್ 20ರಂದು ದೆಹಲಿಯಿಂದ ಆರಂಭವಾದ ಮೂರು ದಿನಗಳ ಅಭಿಯಾನ ಗುರ್ಗಾಂವ್ ಹಾಗೂ ನೋಯ್ಡಾಕ್ಕೂ ತಲುಪಿದೆ. ಗುರ್ಗಾಂವ್‌ನ ಖೇಡ್ಕಿ ದೌಲಾ ಬಳಿ ಕಸದ ರಾಶಿಯಿಂದ ತುಂಬಿದ್ದ ಪ್ರದೇಶವನ್ನು ಬಿಟ್ಟು ಮತ್ತು ತಂಡ ಸ್ವಚ್ಛಗೊಳಿಸಿ 2,435 ಕೆಜಿ ಕಸ ತೆರವುಗೊಳಿಸಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಬೀದಿ ದನಗಳಿಗೆ ಅಪಾಯವಾಗಬಹುದು ಎಂದು ಅವರು ಹೇಳಿದ್ದಾರೆ. ಸ್ಥಳೀಯರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಯಮುನಾ ತೀರದಲ್ಲೂ ಸ್ವಚ್ಛತಾ ಕಾರ್ಯ

ಗುರ್ಗಾಂವ್‌ಗೂ ಮುನ್ನ ದೆಹಲಿಯ ಯಮುನಾ ತೀರದಲ್ಲಿ ತಂಡ ಸ್ವಚ್ಛತಾ ಕಾರ್ಯ ನಡೆಸಿ, ಸುಮಾರು 585 ಕೆಜಿ ಕಸ ತೆರವುಗೊಳಿಸಿತ್ತು. ಬಳಿಕ ನೋಯ್ಡಾದ ಸೆಕ್ಟರ್ 94ರ ಯುವ ಶಕ್ತಿ ಘಾಟ್‌ನಲ್ಲೂ ಅಭಿಯಾನ ಮುಂದುವರಿಸಲಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಬಿಟ್ಟು ಮನವಿ ಮಾಡಿದ್ದಾರೆ.

ಅಜ್ನಾರ್ ನದಿಯಿಂದ ಆರಂಭವಾದ ಪಯಣ

ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯೋರಾದಲ್ಲಿ ಅಜ್ನಾರ್ ನದಿಯ ಸ್ವಚ್ಛತಾ ಕಾರ್ಯದಿಂದ ಬಿಟ್ಟು ಅವರ ಅಭಿಯಾನ ಆರಂಭವಾಯಿತು. 2026ರ ಜನವರಿ 26ರಂದು ಸ್ನೇಹಿತರೊಂದಿಗೆ ಶುರುವಾದ ಈ ಕೆಲಸ ಬಳಿಕ ವೈಯಕ್ತಿಕ ಅಭಿಯಾನವಾಗಿ ಮುಂದುವರಿದಿದೆ. ಪ್ಲಾಸ್ಟಿಕ್, ಕೆಸರು ಸೇರಿದಂತೆ ನದಿ ತೀರದ ತ್ಯಾಜ್ಯವನ್ನು ಅವರು ಕೈಯಿಂದಲೇ ತೆರವುಗೊಳಿಸುತ್ತಿದ್ದಾರೆ.

ಈ ಕೆಲಸದ ವೇಳೆ ಚರ್ಮದ ತೊಂದರೆ, ಸೋಂಕು ಹಾಗೂ ಹಾವುಗಳ ಅಪಾಯ ಎದುರಿಸಿದ್ದಾಗಿ ಬಿಟ್ಟು ಹೇಳಿದ್ದಾರೆ. ಸ್ವಚ್ಛತಾ ಕೆಲಸಕ್ಕೆ ಬೇಕಾದ ಉಪಕರಣಗಳ ಖರ್ಚನ್ನೂ ಸ್ವಂತ ಉಳಿತಾಯದಿಂದ ಭರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಕ್‌ಡೊನಾಲ್ಡ್ಸ್‌ನಲ್ಲಿ ಟೇಬಲ್‌ಗಳ ಮೇಲೆ ಇಲಿ ಚೆಲ್ಲಾಟ! ವಿಡಿಯೋ ವೈರಲ್; ಬಿತ್ತು 3,000 ರೂ. ದಂಡ | Rajkot McDonald's rats

‘ದಿ ಓಶನ್ ಕ್ಲೀನ್‌ಅಪ್’ ಗಮನ ಸೆಳೆದ ಅಭಿಯಾನ

ಬಿಟ್ಟು ಅವರ ಸ್ವಚ್ಛತಾ ಕೆಲಸಕ್ಕೆ ವಿದೇಶದಲ್ಲೂ ಗಮನ ಸಿಕ್ಕಿದೆ. ಡಚ್ ಪರಿಸರ ಸಂಸ್ಥೆ ‘ದಿ ಓಶನ್ ಕ್ಲೀನ್‌ಅಪ್’ನ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ಅವರ ಕೆಲಸವನ್ನು ಗಮನಿಸಿದ್ದು, ಅವರಿಗೆ ಉದ್ಯೋಗದ ಆಫರ್ ನೀಡಿರುವುದಾಗಿ ವರದಿಯಾಗಿದೆ.(ಏಜೆನ್ಸೀಸ್)