ನ್ಯೂಸ್

1-8ನೇ ತರಗತಿ ಶೀಘ್ರ ಶುರು: 9- 12 ತರಗತಿ ಆರಂಭಕ್ಕೆ ಸೋಮವಾರ ಮಾರ್ಗಸೂಚಿ

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ 1 ರಿಂದ 8ನೇ ವರ್ಗದ ಭೌತಿಕ ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಆಗಸ್ಟ್ 30ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಶಾಲೆಗಳ ಆರಂಭಕ್ಕೆ ತಜ್ಞರು ಅನುಮತಿ ನೀಡಿದ್ದಾರೆ. ಕರೊನಾ ನಿಯಮ ಪಾಲನೆಯೊಂದಿಗೆ ಶಾಲೆ ಆರಂಭಿಸಲಾಗುವುದು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಶಾಲೆಗಳನ್ನು ನಡೆಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗುವುದು. ಮೊದಲು 5 ರಿಂದ 8 ನೇ ತರಗತಿ ಆರಂಭಮಾಡಿ ಸ್ವಲ್ಪ ದಿನದ ನಂತರ 1 ರಿಂದ 4 ನೇ ತರಗತಿ ಆರಂಭ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ. 1 ರಿಂದ 8ನೇ ತರಗತಿಗಳನ್ನು ಆರಂಭಿಸು ವುದು ಅತ್ಯಂತ ಜವಾಬ್ದಾರಿಯುತ ಕೆಲಸ.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಅನಿವಾರ್ಯ. 9 ರಿಂದ 12 ತರಗತಿಗಳನ್ನು ಆ.23 ರಿಂದ ಆರಂಭ ಮಾಡುವ ಬಗ್ಗೆ ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸೋಮವಾರ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಇಚ್ಛಿಸುವ ಮಕ್ಕಳಿಗೆ ಆ. 19 ರಿಂದ ಸೆ. 3ರ ತನಕ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು. ರಾಜ್ಯದಲ್ಲಿ ಒಟ್ಟು 5546 ಕಾಲೇಜುಗಳಿಂದ 18,414 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ 187 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರಗಳಲ್ಲಿ ಆ. 17 ರೊಳಗೆ ಪೂರ್ವಸಿದ್ಧತೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಖಚಿತ ಪಡಿಸಿಕೊಳ್ಳಲು ಸೂಚಿಸಲಾಗಿದೆ. ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಪ್ರಕಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೊಷಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರಾದ ಸ್ನೇಹಲ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದರು.