ನ್ಯೂಸ್

ಸಿವಿಲ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ; ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾದ ವಸ್ತ್ರ ಸಂಹಿತೆ ನಿಯಮವಿದು

ಮೋಹನ್​ ಶೆಟ್ಟಿ

ಬೆಂಗಳೂರು: 2022-23ನೇ ಸಾಲಿನ ಮಿಕ್ಕುಳಿದ ವೃಂದದ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಲಿಖಿತ ಪರೀಕ್ಷೆ ಇದೇ ಫೆ.25ರಂದು ನೆಡೆಯಲಿದ್ದು, ಪೊಲೀಸ್​ ಇಲಾಖೆಯಲ್ಲಿರುವ 1,137 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು 25ರ ಬೆಳಗ್ಗೆ 11:00ರಿಂದ 12:30 ಗಂಟೆಯವರೆಗೆ ರಾಜ್ಯಾದ್ಯಂತ ನಡೆಸಲಾಗುವುದು ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಎಸ್.ಎಂ.ಎಸ್ ಮೂಲಕ ಮಾಹಿತಿಯನ್ನು ನೀಡಲಾಗುವುದು ಹಾಗೂ ಕರೆಪತ್ರದ ಲಿಂಕ್ ಅನ್ನು ಸಹ ಕಳುಹಿಸಲಾಗುವುದು, ಅಭ್ಯರ್ಥಿಗಳು ಕರೆಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಲು ಇಲಾಖೆ ಸೂಚಿಸಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು ತಿಳಿಸಿದೆ.

ಪುರುಷ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಪುರುಷ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಪುರುಷ ಅಭ್ಯರ್ಥಿಗಳು ಅರ್ಧ ತೊಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲ‌ ರಹಿತ ಶರ್ಟ್‌ಗಳನ್ನು ಧರಿಸುವುದು, ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸತಕ್ಕದ್ದಲ್ಲ. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸತಕ್ಕದ್ದಲ್ಲ. ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಚಪ್ಪಲಿ ಧರಿಸುವುದು. ಕುತ್ತಿಗೆ ಸುತ್ತಾ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡತಗಳನ್ನು ಧರಿಸುವುದು ನಿಷೇಧಿಸಲಾಗಿದೆ.

ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಅಭ್ಯರ್ಥಿಗಳು ಧರಿಸುವಂತೆ ನಿರ್ದೇಶಿಸಲಾಗಿದೆ.

ಎತ್ತರ ಹಿಮ್ಮಡಿಯ ಶೂಗಳನ್ನು / ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ ಅಥವಾ ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ ಎಂದು ಪತ್ರಿಕಾ ಪ್ರಕಟಣೆ ಉಲ್ಲೇಖಿಸಿದೆ.