ನ್ಯೂಸ್

ಶಾಲಾ ಮಕ್ಕಳ ಬ್ಯಾಗ್​ನಲ್ಲಿ ಕಾಂಡೋಮ್​ ಪತ್ತೆ ಪ್ರಕರಣ: ಹೊಸ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ

ಬೆಂಗಳೂರು: ಈ ಹಿಂದೆ ನಗರದ ಶಾಲಾ ಮಕ್ಕಳ ಬ್ಯಾಗ್​ನಲ್ಲಿ ಕಾಂಡೋಮ್​ ಮತ್ತು ಗರ್ಭ ನಿರೋಧಕ ಮಾತ್ರ ಪತ್ತೆಯಾಗಿದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

18 ವರ್ಷ ವಯಸ್ಸಿನ ಒಳಗೆ ಅಪ್ರಾಪ್ತರಿಗೆ ಕಾಂಡೋಮ್​ ಹಾಗೂ ಗರ್ಭ ನಿರೋಧ ಮಾತ್ರ ಮಾರಾಟ ಮಾಡದಂತೆ ಹೊಸ ನಿಯಮವನ್ನು ತರಲು ಸರ್ಕಾರ ಮುಂದಾಗಿದೆ. ಔಷಧ ನಿಯಂತ್ರಣ ಇಲಾಖೆಯು ಈ ಸಂಬಂಧ ಎಲ್ಲ ಮೆಡಿಕಲ್​ ಶಾಪ್​ ಮಾಲೀಕರಿಗೆ ಖಡಕ್​ ಸೂಚನೆ ನೀಡಿದೆ. ಶಾಲಾ ಮಕ್ಕಳು ಸೇರಿದಂತೆ 18 ವರ್ಷ ಒಳಗಿನ ಯಾವುದೇ ಮಕ್ಕಳಿಗೆ ಕಾಂಡೋಮ್​ ಮತ್ತು ಗರ್ಭ ನಿರೋಧಕ ಮಾತ್ರೆ ಸೇರಿದಂತೆ ಯಾವುದೇ ಉತ್ತೇಜಕ ಮಾತ್ರೆಗಳನ್ನು ಕೊಡುವಂತಿಲ್ಲ ಅಥವಾ ಮಾರಾಟ ಮಾಡುವಂತಿಲ್ಲ.

ಈ ಬಗ್ಗೆ ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ. ಖಾನಾಪುರೆ ಮಾತನಾಡಿ, ಜನಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಾಂಡೋಮ್​ ಎಲ್ಲೆಡೆ ಸಿಗುವಂತೆ ಮಾಡಿದ್ದೇವೆ. ಆದರೆ, ಶಾಲಾ ಮಕ್ಕಳ ಕೈಗೆ ಅದು ಸಿಕ್ಕಿರುವುದರಿಂದ ನಾವು ಒಂದು ಸುತ್ತೋಲೆಯನ್ನು ಹೊರಡಿಸಿದ್ದೇವೆ. ಚಿಕ್ಕ ಮಕ್ಕಳು ಯಾರಾದರೂ ಬಂದು ಕೇಳಿದರೆ, ಮೆಡಿಕಲ್​ ಶಾಪ್​ಗಳಲ್ಲಿ ಕಾಂಡೋಮ್​ ಹಾಗೂ ಮತ್ತು ಬರುಷ ಔಷಧಿಗಳನ್ನು ಕೊಡಬೇಡಿ ಎಂದು ಸೂಚಿಸಿದ್ದೇವೆ ಎಂದರು.

ಘಟನೆ ಹಿನ್ನೆಲೆ ಏನು?

ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಾರೆ, ಅದರಿಂದ ಕಿರಿಕಿರಿ ಆಗುತ್ತಿದೆ ಎಂದು ಬೆಂಗಳೂರಿನ ಶಿಕ್ಷಕರು ಇತ್ತೀಚೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಹಾಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಚೆಕ್ ಮಾಡಿದ ಶಿಕ್ಷಕರಿಗೆ ಆಘಾತ ಕಾದಿತ್ತು.

ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಯ ಕೆಲ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು ಮುಂತಾದ ವಸ್ತುಗಳು ಸಿಕ್ಕಿದ್ದವು. ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಕಂಡುಬಂದಿತ್ತು. ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 18 ವರ್ಷ ಒಳಗಿನ ಮಕ್ಕಳಿಗೆ ಕಾಂಡೋಮ್​, ಗರ್ಭ ನಿರೋಧಕ ಮಾತ್ರೆ ಮಾರಾಟ ಮಾಡದಂತೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. (ದಿಗ್ವಿಜಯ ನ್ಯೂಸ್​)