ನವದೆಹಲಿ: ದಕ್ಷಿಣ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕಳೆದ ಕೆಲವು ದಿನಗಳಿಂದ ಲೈಂಗಿಕ ಕಿರುಕುಳ(sexual harassment) ಪ್ರಕರಣದಲ್ಲಿ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಅವರ ಮೇಲೆ 21 ವರ್ಷದ ಯುವತಿ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದು, ಸೆ.19 ರಂದು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಆದರೆ ಈಗ ಅವರ ರಾಷ್ಟ್ರೀಯ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ‘ಸಾವಿರ ಹಸು ಕೊಡ್ತೇನೆ, ಟಿಟಿಡಿಗೆ ಸ್ವಂತ ಡೇರಿ ಮಾಡಿ’: ಸಿಎಂ ಚಂದ್ರಬಾಬುಗೆ ಪತ್ರ ಬರೆದ ಭಕ್ತ! Tirupati Laddu Row
ಜಾನಿ ಮಾಸ್ಟರ್ ಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದ್ದು, ಅಕ್ಟೋಬರ್ 8 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರದಾನ ಮಾಡಬೇಕಿತ್ತು. ಇದರ ನಡುವೆ ಜಾನಿ ಮಾಸ್ಟರ್ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 6 ರಿಂದ ಅಕ್ಟೋಬರ್ 10 ರವರೆಗೆ ಜಾಮೀನು ಸಹ ಪಡೆದಿದ್ದಾರೆ. ಆದರೆ ಈಗ ಅವರ ರಾಷ್ಟ್ರೀಯ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ.
ಚಲನಚಿತ್ರೋತ್ಸವ ನಿರ್ದೇಶನಾಲಯದ ಉಪನಿರ್ದೇಶಕಿ ಇಂದ್ರಾಣಿ ಬೋಸ್ ಮಾತನಾಡಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶವು ಈ ಸಂಬಂಧ ಪ್ರಕಟಣೆ ನೀಡಿದ್ದು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗಾಗಿ ಅಭ್ಯರ್ಥಿಗಳು ಸಲ್ಲಿಸಿರುವ ಮಾಹಿತಿಯಲ್ಲಿ ಅವರ ಮೇಲೆ ಗುರುತರ ಆರೋಪಗಳು ಇರಬಾರದು ಎಂದು ತಿಳಿಸಿತ್ತು. ಅದರಂತೆ 'ಆರೋಪದ ಗಂಭೀರತೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣದ ಬಾಕಿ ಇರುವ ಹಿನ್ನೆಲೆಯಲ್ಲಿ, ಸಕ್ಷಮ ಪ್ರಾಧಿಕಾರವು ಶೇಖ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ಗೆ 2022 ರ ಚಲನಚಿತ್ರ ತಿರುಚಿತ್ರಂಬಲಂ ನ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಘೋಷಿಸಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.