ನ್ಯೂಸ್

ಆಯ್ಕೆ ನಮ್ಮದೇ - ರಾಜಿ ಏತಕೆ?

ಜೀವನದಲ್ಲಿ ಆನಂದವಾಗಿರುವುದು ಅಥವಾ ದುಃಖದಿಂದಿರುವುದು ನಮ್ಮ ಆಯ್ಕೆ ಎಂದು ತಿಳಿದವರು ಹೇಳುತ್ತಾರೆ. ನಾವು ನಿಜವಾಗಲೂ ಇಚ್ಛಿಸಿದಂತೆ, ಆಯ್ದುಕೊಂಡಂತೆ ಜೀವಿಸಬಹುದು. ಆದರೆ ನಮ್ಮ ಆಯ್ಕೆ ಸರಿಯಾಗಿರಬೇಕು, ಅದರಲ್ಲಿ ಸ್ಪಷ್ಟತೆ ಇರಬೇಕು. ಅದಕ್ಕೆ ಅಗತ್ಯವಾದ ಪರಿಶ್ರಮವನ್ನು ಸರಿಯಾದ ಸಮಯದಲ್ಲಿ ಮಾಡಬೇಕು.

ಫೇಸ್​ಬುಕ್ಕನ್ನು ಇಂದಿನ ದಿವಸಗಳಲ್ಲಿ ವಿಶ್ವದಾದ್ಯಂತ ಅಬಾಲ-ವೃದ್ಧರು ಉಪಯೋಗಿಸುತ್ತಿದ್ದಾರೆ. ಅದರ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್. ಆತ ಕಾಲೇಜಿನಲ್ಲಿ ಓದುತ್ತಿದ್ದಾಗ 2004ರಲ್ಲಿ ಫೇಸ್​ಬುಕ್ ಪ್ರಾರಂಭಿಸುತ್ತಾನೆ. ಪ್ರಾರಂಭದ ದಿನಗಳಲ್ಲಿ ಜನರು ಅವನ ಕುರಿತು ತಮಾಷೆ ಮಾಡುತ್ತಾರೆ. ಆದರೆ ಆಶ್ಚರ್ಯವೆಂಬಂತೆ ಒಂದೇ ವರ್ಷದಲ್ಲಿ 1 ಮಿಲಿಯನ್ ಜನರು ಅದನ್ನು ಉಪಯೋಗಿಸುತ್ತಿರುತ್ತಾರೆ. ಅದನ್ನು ಇನ್ನೂ ಚೆನ್ನಾಗಿ ಮಾಡಲು ಮಾರ್ಕ್ ಆಲೋಚಿಸುತ್ತಾನೆ. ಒಂದು ಕಡೆ ವ್ಯಾಸಂಗ; ಮತ್ತೊಂದೆಡೆ ಕನಸು. ಬಹಳಷ್ಟು ಆಲೋಚಿಸಿ ಅವನ ಕನಸಿಗೇ ಮಹತ್ವವನ್ನು ಕೊಟ್ಟು ವ್ಯಾಸಂಗವನ್ನು ನಿಲ್ಲಿಸುತ್ತಾನೆ.

2006ರಲ್ಲಿ ಅವನು ಓದುತ್ತಿದ್ದ ಕಾಲೇಜಿನಿಂದ ಅವನ ಮೇಲೆ ಮೊಕದ್ದಮೆ ಹೂಡುತ್ತಾರೆ. ಅದು 2011 ರವರೆಗೆ ನಡೆಯುತ್ತದೆ. ಅಲ್ಲದೆ ಅದೇ ಸಮಯದಲ್ಲಿ ಕೆಲವು ವಿಶ್ವದಲ್ಲೇ ಆಗರ್ಭ ಶ್ರೀಮಂತರು, ಉದ್ಯಮಿಗಳು ಫೇಸ್​ಬುಕ್ಕನ್ನು ತಮಗೆ ಮಾರಲು ಒತ್ತಾಯಿಸುತ್ತಾರೆ. ಸಾಕಷ್ಟು ಹಣ ಮತ್ತು ಅವನ ಕಷ್ಟಗಳಿಗೆ ನೆರವು ನೀಡುವುದಾಗಿ ತಿಳಿಸುತ್ತಾರೆ. ಅವನ ಜೊತೆ ಕೆಲಸ ಮಾಡುತ್ತಿ್ತ್ದ ಕೆಲವು ಪ್ರಮುಖರು ಒತ್ತಾಯಿಸುತ್ತಾರೆ. ಆದರೆ ಅವನು ಫೇಸ್​ಬುಕ್ ಮಾರಲು ಒಪ್ಪುವುದಿಲ್ಲ. ಅದರಿಂದ ಅವನ ಜೊತೆಗಿದ್ದ ಪ್ರಮುಖರು ಅವನನ್ನು ತೊರೆಯುತ್ತಾರೆ. ಹೀಗೆ ಅನೇಕ ಕಷ್ಟಗಳನ್ನು, ಸವಾಲುಗಳನ್ನು ಜುಕರ್​ಬರ್ಗ್ ಎದುರಿಸಿ ಇಂದು ಜಯಶಾಲಿಯಾಗಿದ್ದಾನೆ. ಅಷ್ಟೇ ಅಲ್ಲದೆ ಕನಸು ನನಸಾದ ಬಳಿಕ, 12 ವರ್ಷಗಳ ನಂತರ ವ್ಯಾಸಂಗವನ್ನೂ ಮುಂದುವರಿಸಿ 2017ರಲ್ಲಿ ಮಾರ್ಕ್ ಪದವೀಧರನಾದ. ಹೀಗೆ ಜೀವನದಲ್ಲಿ ಬಂದ ಸನ್ನಿವೇಶಗಳನ್ನು ಸಮರ್ಪಕವಾಗಿ ಎದುರಿಸಿ ಜಯಶಾಲಿಗಳಾಗುವುದು ನಮ್ಮ ಕೈಯ್ಯಲ್ಲಿದೆ. ಜೀವನದ ಪಯಣದಲ್ಲಿ ನಮ್ಮ ಆಲೋಚನೆ, ಸಂಸ್ಕಾರ, ಮಾಡುವ ಕರ್ಮಗಳು, ನಮ್ಮ ವ್ಯಕ್ತಿತ್ವದಂತೆ ರೂಪಿತವಾಗಿರುತ್ತದೆ.