ನ್ಯೂಸ್

ಚಿನ್ಮಯದಾಸ ಪರ ವಕೀಲರಿಗೆ ಬೆದರಿಕೆ; ನ್ಯಾಯವಾದಿ ಮೇಲೆ ಹಲ್ಲೆ, ತಿಂಗಳ ನಂತರ ಜಾಮೀನು ಅರ್ಜಿ ವಿಚಾರಣೆ

ಢಾಕಾ: ಹಿಂದುಗಳ ವಿರುದ್ಧ ದಾಳಿ ನಿರಂತರವಾಗಿರುವ ಬಾಂಗ್ಲಾದೇಶದಲ್ಲಿ ಕೆಲವು ದಿನಗಳ ಹಿಂದೆ ಬಂಧಿತರಾಗಿರುವ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿ ಪರವಾಗಿ ವಾದಿಸಲು ಮಂಗಳವಾರ ಯಾವುದೇ ವಕೀಲರು ಕೋರ್ಟ್​ಗೆ ಬಾರದಿರುವುದರಿಂದ ಅವರ ಜಾಮೀನು ಅರ್ಜಿ ವಿಚಾರಣೆ ಒಂದು ತಿಂಗಳ ನಂತರ ನಡೆಯಲಿದೆ. ಈ ನಡುವೆ, ತನ್ನ ವಕ್ತಾರ ಚಿನ್ಮಯ ದಾಸರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಭಾಗವಹಿಸುವುದನ್ನು ತಡೆಯಲು ಸುಮಾರು 70 ಹಿಂದು ವಕೀಲರನ್ನು ಸುಳ್ಳು ಮೊಕದ್ದಮೆಯಲ್ಲಿ ಸಿಲುಕಿಸಲಾಗಿದೆ ಎಂದು ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್ ಆರೋಪಿಸಿದೆ. ಹಿಂದು ಸನ್ಯಾಸಿ ಪರ ವಾದಿಸಲು ಮುಂದಾದ ಬಾಂಗ್ಲಾ ವಕೀಲರೊಬ್ಬರ ಮೇಲೆ ಅವರ ಮನೆಯಲ್ಲಿ ಇಸ್ಲಾಮ್ಾದಿಗಳು ಹಲ್ಲೆ ನಡೆಸಿದ್ದು ಅವರೀಗ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆಂದು ಇಸ್ಕಾನ್ ಇದಕ್ಕೂ ಮುನ್ನ ಹೇಳಿತ್ತು.

ಮಂಗಳವಾರ ಸ್ವಾಮೀಜಿ ಪರವಾಗಿ ವಾದಿಸಲು ವಕೀಲರು ನಿರಾಕರಿಸಿದ್ದರಿಂದ ಛತ್ತೋಗ್ರಾಮ್ ನ್ಯಾಯಾಲಯ ವಿಚಾರಣೆಯನ್ನು 2025ರ ಜನವರಿ 2ಕ್ಕೆ ಮುಂದೂಡಿತು. ರಾಜಕೀಯ ಪ್ರೇರಿತ ವಕೀಲರ ಗುಂಪೊಂದರ ಬೆದರಿಕೆ ಯಿಂದಾಗಿ ಅವರ ಪರವಾಗಿ ವಕಾಲತ್ತು ನಡೆಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಜಾಗರಣ್ ಜೋತ್ ಮುಖಂಡ ಸ್ವತಂತ್ರ ಗೌರಂಗ ದಾಸ್ ಹೇಳಿದ್ದಾರೆ.

ಚಾನಲ್ ನಿಷೇಧಕ್ಕೆ ಮನವಿ: ಎಲ್ಲ ಭಾರತೀಯ ಟಿವಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಹೋಟೆಲ್​ಗಳಲ್ಲಿ ಬಾಂಗ್ಲಾದೇಶೀಯರಿಗೆ ಆಹಾರವಿಲ್ಲ: ನೆರೆಯ ದೇಶದಲ್ಲಿ ಭಾರತೀಯ ಧ್ವಜಕ್ಕೆ ಅವಮಾನ ವಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿ ಅತಿಥಿಗಳಿಗೆ ತಿಂಡಿತೀರ್ಥ ಒದಗಿಸದಿರಲು ತ್ರಿಪುರಾದ ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳು ನಿರ್ಧರಿಸಿವೆ ಎಂದು ಅಖಿಲ ತ್ರಿಪುರಾ ಹೋಟೆಲ್ ಮಾಲೀಕರ ಸಂಘ ಪ್ರಕಟಿಸಿದೆ.

ಭಾರತೀಯ ರಾಜತಾಂತ್ರಿಕನಿಗೆ ಬುಲಾವ್: ತ್ರಿಪುರಾದಲ್ಲಿ ಬಾಂಗ್ಲಾ ರಾಜತಾಂತ್ರಿಕ ಕಚೇರಿಯಲ್ಲಿ ನಡೆದಿದೆ ಎನ್ನಲಾದ ದಾಂಧಲೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮಂಗಳವಾರ ಢಾಕಾದಲ್ಲಿರುವ ಭಾರತೀಯ ಹೈ ಕಮಿಷನರ್ ಪ್ರಣಯ್ ವರ್ವ ಅವರನ್ನು ಕರೆಸಿ ದೇಶದ ಕಳವಳವನ್ನು ದಾಖಲಿಸಿತು.

ಮಾನವ ಹಕ್ಕು ಉಲ್ಲಂಘನೆ: ಚಿನ್ಮಯ ದಾಸರ ವಕೀಲರ ಮೇಲೆ ಆಕ್ರಮಣ ನಡೆದಿರುವುದರಿಂದ ಬಾಂಗ್ಲಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಬಾಂಗ್ಲಾ ಬೆಳವಣಿಗೆಗಳ ಬಗ್ಗೆ ಬ್ರಿಟನ್ ಸಂಸತ್ತಿನಲ್ಲೂ ಕಳವಳ ವ್ಯಕ್ತಪಡಿಸಲಾಗಿದೆ.

ಇಸ್ಕಾನ್ ಮನವಿ: ವಿವೇಚನೆಯಿಂದ ತಮ್ಮ ಧರ್ಮವನ್ನು ಪಾಲಿಸುವಂತೆ ಬಾಂಗ್ಲಾದೇಶದ ತನ್ನ ಸನ್ಯಾಸಿಗಳು ಮತ್ತು ಅನುಯಾಯಿ ಗಳಿಗೆ ಸಲಹೆ ಮಾಡಲಾಗಿದೆಯೆಂದು ಇಸ್ಕಾನ್ ಕೋಲ್ಕತ ವಕ್ತಾರ ರಾಧಾರಮಣ ದಾಸ ಹೇಳಿದ್ದಾರೆ. ಸಾರ್ವಜನಿಕವಾಗಿ ಕೇಸರಿ ನಿಲುವಂಗಿ ಹಾಗೂ ತಿಲಕ ಹಾಕಿಕೊಳ್ಳದಂತೆ ಸೂಚಿಸಲಾಗಿದೆ ಎಂದೂ ತಿಳಿಸಿದ್ದಾರೆ.