ಬೀಜಿಂಗ್: ಜಗತ್ತಿನ ಶ್ರೀಮಂತರ ಪಟ್ಟಿಯನ್ನು ಮಾಡಿದಾಗ ಅದರಲ್ಲಿ ಕಾಣಿಸುವ ಹೆಸರುಗಳ ಪೈಕಿ ಬಹುತೇಕ ಮಂದಿಯ ಹಿನ್ನೆಲೆ ನೋಡಿದಾಗ ಅವರೆಲ್ಲರೂ ಹಗಲು ರಾತ್ರಿ ಕಷ್ಟಪಟ್ಟ ಇತಿಹಾಸ ಕಾಣಸಿಗುತ್ತದೆ. ಕೆಲವೇ ಕೆಲವರು ಮತ್ತು ಮತ್ತು ತಂದೆ, ತಾತ-ಮುತ್ತಾತರ ಆಸ್ತಿಯಿಂದ ಶ್ರೀಮಂತರಾಗಿದ್ದರೂ, ಹಲವರು ಕಷ್ಟಪಟ್ಟು ದುಡಿದು ಮೇಲೆ ಬಂದವರೇ ಇರುತ್ತಾರೆ. ತುತ್ತು ಅನ್ನಕ್ಕೂ ಕಷ್ಟಪಟ್ಟು ಇಂದು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡವರೂ ಅಧಿಕ ಮಂದಿಯೇ.
ಆದರೆ ಚೀನಾದ ಒಬ್ಬ ಸಾಮಾನ್ಯ ಗೃಹಿಣಿ, ರಾತ್ರಿ ಬೆಳಗಾಗುವುದರೊಳಗೆ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡುಬಿಟ್ಟಿದ್ದಾಳೆ. ಅದೂ ಒಂದು ಪೈಸೆಯೂ ಸ್ವಂತ ದುಡಿಯದೇ.
ಹಾಗಿದ್ದರೆ ಈಕೆ ಜಗತ್ತಿನ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡದ್ದು ಹೇಗೆ ಎನ್ನುವುದು ಈಗಿರುವ ಪ್ರಶ್ನೆ. ಅಂದಹಾಗೆ, ಈಕೆಯ ಹೆಸರು ಲೀ ಕಿಯಾಂಗ್. ವಯಸ್ಸು 49. ಕೆನಡಾ ಮೂಲದವಳು. ಈಕೆ ಕೆಲ ವರ್ಷಗಳ ಹಿಂದೆ ಚೀನದ ದೈತ್ಯ ಉದ್ಯಮಿಗಳಲ್ಲಿ ಒಬ್ಬರಾದ ಡು ವಯಮ್ನೀನ್ರನ್ನು ಮದುವೆಯಾಗಿದ್ದಳು. ಈತ ಲಕ್ಷ ಲಕ್ಷ ಕೋಟಿಗಳ ಒಡೆಯ. ಜತೆಗೆ ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ “ಶೆಂಜೇನ್ ಕಂಗಯ್ ಬಯೋಲಾಜಿಕಲ್ ಪ್ರಾಡಕ್ಟ್ ಲಿಮಿಟೆಡ್’ ಔಷಧ ಕಂಪನಿಯ ಮಾಲೀಕ ಕೂಡ.
ದಂಪತಿ ನಡುವೆ ಮದುವೆಯಾಗಿ ಕೆಲ ವರ್ಷಗಳಲ್ಲಿಯೇ ಮನಸ್ತಾಪ ಉಂಟಾಯಿತು. ಈ ಹಿನ್ನೆಲೆಯಲ್ಲಿ ಲೀ ಕಿಯಾಂಗ್ ತನ್ನ ಪತಿಗೆ ವಿಚ್ಛೇದನ ನೀಡುವ ಸಂಬಂಧ ಕೋರ್ಟ್ ಮೊರೆ ಹೋದಳು. ಈಕೆಯ ಜತೆ ಬಾಳಲು ಇಷ್ಟಪಡದ ಡು ವಯಮ್ನೀನ್ ಕೂಡ ವಿಚ್ಛೇದನ ನೀಡಲು ಒಪ್ಪಿಕೊಂಡ.
ಇದೇ ಲೀ ಕಿಯಾಂಗ್ನ ಜೀವನದ ಟರ್ನಿಂಟ್ ಪಾಯಿಂಟ್ ಆಯಿತು. ಕೋರ್ಟ್ ಇಬ್ಬರಿಗೂ ವಿಚ್ಛೇದನ ನೀಡಿತು. ಆದರೆ ಲೀ ಕಿಯಾಂಗ್ಗೆ ಯಾವುದೇ ದುಡಿಮೆ ಇಲ್ಲದ ಹಿನ್ನೆಲೆಯಲ್ಲಿ ಆಕೆಯ ಪತಿಯ ಸಂಪೂರ್ಣ ಆಸ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಪರಿಹಾರದ ಮೊತ್ತ ನೀಡುವಂತೆ ಕೋರ್ಟ್ ಆದೇಶಿಸಿತು.
ಕೋರ್ಟ್ ಆದೇಶದ ಮೇರೆಗೆ ಡು ವಯಮ್ನೀನ್ ತಮ್ಮ ಔಷಧ ಕಂಪನಿಯಾದ ಶೆಂಜೇನ್ ಕಂಗಯ್ ಬಯೋಲಾಜಿಕಲ್ ಪ್ರಾಡಕ್ಟ್ ಲಿಮಿಟೆಡ್’ನ ಏಳು ಬಿಲಿಯನ್ ಯವಾನ್ (74 ಸಾವಿರ ಕೋಟಿ ರೂಪಾಯಿ) ಮೌಲ್ಯದ 278 ದಶಲಕ್ಷ ಶೇರ್ಗಳನ್ನು ಹೆಂಡತಿಗೆ ವರ್ಗಾವಣೆ ಮಾಡಿದ್ದಾನೆ. ಇದರ ಜತೆಗೆ ಕೋರ್ಟ್ ಆದೇಶದ ಮೇರೆಗೆ ತನ್ನ ಆಸ್ತಿಯ ಪಾಲನ್ನೂ ನೀಡಿದ್ದಾನೆ. ಇಷ್ಟೇ ಅಲ್ಲದೇ, ಇದೀಗ ಈಕೆ ಬೀಜಿಂಗ್ನ ಮಿನ್ಹಾಯ್ ಬಯಾಟೆಕ್ನಾಲಜಿ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕಿ ಆಗಿಯೂ ನೇಮಕಗೊಂಡಿದ್ದಾಳೆ!
ಈ ಮೂಲಕ ಇದೀಗ ಈಕೆ ಜಗತ್ತಿನ ಅತಿ ಸಿರಿವಂತರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾಳೆ. ಜತೆಗೆ ಅತಿ ಹೆಚ್ಚು ಪರಿಹಾರ ಪಡೆದಿರುವ ವಿಚ್ಛೇದಿತೆ ಎಂದೂ ಪ್ರಸಿದ್ಧಿ ಹೊಂದಿದ್ದಾಳೆ. (ಏಜೆನ್ಸೀಸ್)