ನ್ಯೂಸ್

ಕರೊನಾ ಜನ್ಮಸ್ಥಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಶುರುವಾಗಿವೆ ಶಾಲೆ- ಕಾಲೇಜುಗಳು...!

rameshmysuru

ಬೀಜಿಂಗ್​: ಇಡೀ ಜಗತ್ತಿಗೆ ಕರೊನಾ ಹಂಚಿದ ಚೀನಾ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಅದರಲ್ಲು ಕರೊನಾ ಜನ್ಮಸ್ಥಾನವಾದ ವುಹಾನ್​ ಪ್ರದೇಶದಲ್ಲಿ ಶಾಲಾ- ಕಾಲೇಜುಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ.

ಕಳೆದೆರಡು ವಾರಗಳಿಂದ ಇಲ್ಲಿ ಯಾವುದೇ ಹೊಸ ಕರೊನಾ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಚೀನಾದಲ್ಲಿ ವಿದ್ಯಾರ್ಥಿಗಳು ಎಂದಿನಂತೆ ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮೊದಲ ದಿನವೇ ಶೇ.75 ಹಾಜರಾತಿ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಚೀನಾದ ವಿವಿಧ ಪ್ರದೇಶಗಳಲ್ಲಿ ವ್ಯಕ್ತಿಗತ ಅಂತರ ಪಾಲನೆ ಹಾಗೂ ಮಾಸ್ಕ್​ ಧರಿಸುವ ಬಗ್ಗೆ ವಿಭಿನ್ನ ನಿಯಮಗಳಿವೆ. ಕೆಲವೆಡೆ ಕಡ್ಡಾಯವಾಗಿಲ್ಲ. ಆದರೂ, ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುವ ಮುನ್ನ ಅವರ ದೇಹದ ತಾಪಮಾನ ಪರೀಕ್ಷಿಸಲಾಗುತ್ತಿದೆ.

ಮಂಗಳವಾರ ಚೀನಾದಲ್ಲಿ 10 ಹೊಸ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ, ಅವರಲ್ಲಿ ಯಾರಿಗೂ ಸ್ಥಳೀಯವಾಗಿ ಸೋಂಕು ಕಾಣಿಸಿಕೊಂಡಡಿಲ್ಲ. ಬದಲಾಗಿ ವಿದೇಶದಿಂದ ಬಂದ ಕಾರಣದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಡಿಸೆಂಬರ್​ನಲ್ಲಿ ವುಹಾನ್​ನಲ್ಲಿ ಕರೊನಾ ಕಾಣಿಸಿಕೊಂಡ ಬಳಿಕ ಚೀನಾದಲ್ಲಿ ಒಟ್ಟಾರೆ 85,058 ಕೋವಿಡ್​ ಪ್ರಕರಣಗಳು ಕಂಡು ಬಂದಿದ್ದರೆ, ಕರೊನಾ ಸೋಂಕಿನಿಂದ ಸತ್ತವರ ಸಂಖ್ಯೆ 4,634 ಆಗಿದೆ.