ನ್ಯೂಸ್

ಟಿಕ್​ಟಾಕ್​ ಸ್ಟಾರ್​ ಲೈವ್​ ಶೋ ನಡುವೆಯೇ ಮನೆಗೆ ನುಗ್ಗಿದ ಮಾಜಿ ಪತಿಯಿಂದ ನಡೆಯಿತು ಭೀಕರ ಕೃತ್ಯ..!

ಬೀಜಿಂಗ್​: ಚೀನಾದ ಸೋಶಿಯಲ್​ ಮಿಡಿಯಾ ಸ್ಟಾರ್​ ಲೈವ್​​ ಶೋ ಮಾಡುವಾಗಲೇ ಆಕೆಯ ಮಾಜಿ ಪತಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆನ್ನಲಾದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಲಮು ಎಂಬಾಕೆಯೆ ಮೃತ ದುರ್ದೈವಿ. ಈಕೆ ವಿಡಿಯೋ ಬ್ಲಾಗರ್​ ಆಗಿದ್ದು, ಲೈವ್​ ಶೋ ಮಾಡುವಾಗ ದೊಡ್ಡ ಚಾಕು ಮತ್ತು ಪೆಟ್ರೋಲ್​ ಹಿಡಿದು ಮನೆಗೆ ನುಗ್ಗಿದ ಲಮು ಮಾಜಿ ಪತಿ ಟ್ಯಾಮ್​, ಕುಟುಂಬದ ಮುಂದೆಯೇ ಆಕೆಯ ಮೇಲೆ ಹಲ್ಲೆ ಮಾಡಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದ. ಈ ಘಟನೆ ಸೆಪ್ಟೆಂಬರ್​ ಮಧ್ಯದಲ್ಲಿ ನಡೆದಿತ್ತು.

ಶೇ. 90 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಎರಡು ವಾರದವರೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಲಮು, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಲಮು ಮಾಜಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಗೆ ನಿಖರ ಕಾರಣ ಏನಿರಬಹುದು ಎಂಬ ತನಿಖೆಯನ್ನು ನಡೆಸುತ್ತಿದ್ದಾರೆ.

ಚೀನಾದ ಕೆಲ ಮಾಧ್ಯಮ ವರದಿಗಳ ಪ್ರಕಾರ ಕೌಟಂಬಿಕ ಕಲಹದಿಂದ ಬೇಸತ್ತು ಲಮು ವಿಚ್ಛೇದನ ಪಡೆದುಕೊಂಡಿದ್ದಳು. ಹೀಗಾಗಿ ಅದೇ ದ್ವೇಷದಿಂದ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಅಂದಹಾಗೆ ಲಮು ಪ್ರಖ್ಯಾತ ಟಿಬೆಟನ್​ ವಿಡಿಯೋ ಬ್ಲಾಗರ್​ ಆಗಿದ್ದಳು. ಪಶ್ಚಿಮ ಚೀನಾದ ಸಿಚುವಾನ್​ ಪ್ರಾಂತ್ಯದ ಪರ್ವತದ ತಪ್ಪಲಿನ ಸುಂದರ ಪರಿಸರದಲ್ಲಿ ಕುಟುಂಬದೊಡನೆ ವಾಸವಿದ್ದಳು. ಟಿಕ್​ಟಾಕ್​ ಮಾದರಿಯ ಚೀನಾ ವರ್ಷನ್​ ಡುಯೀನ್​ನಲ್ಲಿ ಬರೋಬ್ಬರಿ 782,000 ಹಿಂಬಾಲಕರನ್ನು ಲಮು ಹೊಂದಿದ್ದಳು. ಆಕೆ ಸೆ. 14ರಂದು ಕೊನೆಯ ವಿಡಿಯೋ ಅಪ್​ಲೋಡ್​ ಮಾಡಿದ್ದಳು. ಇದೀಗ ಮಾಜಿ ಪತಿಯ ದುಷ್ಕೃತ್ಯಕ್ಕೆ ಲಮು ಬಲಿಯಾಗಿದ್ದು, ಆಕೆಯ ಅಭಿಮಾನಿಗಳು ಸಂತಾಪ ಸೂಚಿಸಿ, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)