ನವದೆಹಲಿ: 'ಕೋವಿಡ್ ರೋಗಿಗಳಿಗೆ ಸರಬರಾಜಾಗುವ ವೈದ್ಯಕೀಯ ಆಮ್ಲಜನಕ ಸಾಗಾಣೆಗೆ ಚೀನಾ ತಡೆಯೊಡ್ಡುತ್ತಿದೆ' ಎಂಬ ನಟ ಸೋನು ಸೂದ್ ಆರೋಪಕ್ಕೆ ಭಾರತದಲ್ಲಿರುವ ಚೀನಾ ರಾಯಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಟ್ವೀಟ್ ಮಾಡಿದ್ದ ಸೋನು ಸೂದ್ ಅವರು, 'ನಾವು ಭಾರತಕ್ಕೆ ಪ್ರಪಂಚದ ಬೇರೆ ಬೇರೆ ಕಡೆಯಿಂದ ಆಕ್ಸಿಜನ್ ಸಿಲಿಂಡರ್ಗಳನ್ನು ತರಿಸಿಕೊಳ್ಳುತ್ತಿದ್ದೇವೆ. ಆದರೆ ದುರಾದೃಷ್ಟವೆಂದರೇ ಚೀನಾ ನಮ್ಮ ದೇಶಕ್ಕೆ ಬರುವ ಆಕ್ಸಿಜನ್ ಸಿಲಿಂಡರ್ಗಳಿಗೆ ತಡೆಯೊಡ್ಡುತ್ತಿದೆ. ಇಲ್ಲಿ ನಾವು ಅನೇಜ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ದಯವಿಟ್ಟು ಇಂತಹ ಕೆಲಸಕ್ಕೆ ಮುಂದಾಗದೇ ನಮಗೆ ಸಹಾಯ ಮಾಡಿ' ಎಂದು ಚೀನಾ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಈ ಕುರಿತು ಅಸಮಾಧಾನಗೊಂಡು ಸೋನು ಸೂದ್ ಟ್ವೀಟ್ಗೆ ಉತ್ತರ ನೀಡಿರುವ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವಿಡಾಂಗ್ ಅವರು, 'ಸೋನು ಸೂದ್ ಅವರೇ ಕೋವಿಡ್19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಚೀನಾ ಗರಿಷ್ಠ ಸಹಾಯ ನೀಡುತ್ತಿದೆ. ಚೀನಾ ಮತ್ತು ಭಾರತದ ನಡುವಿನ ಸರಕು ಸಾಗಾಣೆಗೆ ಯಾವುದೇ ತಡೆ ನೀಡಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಎರಡು ವಾರದಲ್ಲಿ ಭಾರತ ಮತ್ತು ಚೀನಾದ ನಡುವೆ 63 ಸರಕು ಸಾಗಾಣೆ ವಿಮಾನಗಳು ಸಂಚರಿಸಿವೆ' ಎಂದು ಹೇಳಿದ್ದಾರೆ.
ಮುಂದುವರೆದು ಮತ್ತೊಂದು ಟ್ವೀಟ್ ಮಾಡಿರುವ ಸನ್ ವಿಡಾಂಗ್ ಅವರು, ಏನೇ ಸಮಸ್ಯೆ ಇದ್ದರೇ ಈಮೇಲ್ ಮೂಲಕ ನನ್ನ ಗಮನಕ್ಕೆ ತನ್ನಿ. ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಸೋನು ಸೂದ್ ಉಲ್ಲೇಖಿಸಿ ಹೇಳಿದ್ದಾರೆ.