ನವದೆಹಲಿ/ಬೀಜಿಂಗ್ : ಆರು ಭಾರತೀಯ ರಫ್ತು ಕಂಪನಿಗಳಿಂದ ಫ್ರೋಜನ್ ಸೀಫುಡ್ ಉತ್ಪನ್ನಗಳ ಆಮದನ್ನು ಚೀನಾ ಒಂದು ವಾರದ ಮಟ್ಟಿಗೆ ಸ್ಥಗಿತಗೊಳಿಸಿದೆ. ಈ ಉತ್ಪನ್ನಗಳ ಹೊರಗಣ ಪ್ಯಾಕೇಜಿಂಗ್ನಲ್ಲಿ ಕರೊನಾ ವೈರಸ್ನ ಕುರುಹುಗಳು ಪತ್ತೆಯಾಗಿರುವುದಾಗಿ ಚೀನೀ ಕಸ್ಟಮ್ಸ್ ಇಲಾಖೆ ಕಾರಣ ನೀಡಿದೆ.
ಕಳೆದ ವರ್ಷದ ಆರಂಭದಿಂದಲೂ ಚೀನಾ, ಪ್ರಪಂಚದ ವಿವಿಧೆಡೆಯಿಂದ ಆಮದು ಮಾಡಿದ ಫ್ರೋಜನ್ ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರತೀತಿ ಹೊಂದಿದೆ. ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿ ಕರೊನಾ ವೈರಸ್ನ ಕುರುಹುಗಳು ಕಂಡರೆ ಸಂಬಂಧಿತ ಕಂಪನಿಗಳಿಂದ ಆಮದನ್ನು ಸ್ಥಗಿತಗೊಳಿಸುತ್ತಾ ಬಂದಿದೆ ಎನ್ನಲಾಗಿದೆ.
ಕರೊನಾ ವೈರಸ್ 2019 ರ ಡಿಸೆಂಬರ್ನಲ್ಲಿ ಚೀನಾದ ವುಹಾನ್ನಲ್ಲಿ ಹುಟ್ಟಿದ್ದರೂ, ಕಠಿಣ ನಿರ್ಬಂಧಗಳ ಮೂಲಕ ಚೀನಾ ಕರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಹೊರದೇಶಗಳಿಂದ ಬರುವ ಜನರಿಂದಾಗಿ ಕೆಲವು ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ದೇಶದಲ್ಲಿ ಜೂನ್ 9 ರಂದು ಸ್ಥಳೀಯವಾಗಿ ಹರಡಿದ 6 ಕರೊನಾ ಪ್ರಕರಣಗಳು ಮತ್ತು 15 ವಿದೇಶೀಯ ಮೂಲದ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ. (ಏಜೆನ್ಸೀಸ್)