ನ್ಯೂಸ್

ಇನ್ಮುಂದೆ ಈ ದೇಶದಲ್ಲಿ ಕಾನೂನುಬದ್ಧವಾಗಿ ಅವಿವಾಹಿತ ಮಹಿಳೆಯರು ಗರ್ಭ ಧರಿಸಬಹುದು!

ಚೀನಾ: ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಿವಾಹಿತರು ಗರ್ಭಧರಿಸಬಹುದು. ಇದಕ್ಕಾಗಿ ಕೆಲ ನಿರ್ಬಂಧಗಳನ್ನು ತೆಗೆದು ಹಾಕಲು ಚೀನಾ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಿಚುವಾನ್‌ನ ಆರೋಗ್ಯ ಆಯೋಗವು ಫೆಬ್ರವರಿ 15 ರಿಂದ ಮಕ್ಕಳ ಜನನಗಳನ್ನು ನೋಂದಾಯಿಸಲು ಎಲ್ಲಾ ಜನರಿಗೆ ಅವಕಾಶ ನೀಡುವುದಾಗಿ ಈಗಾಗಲೇ ಘೋಷಿಸಿದೆ.

ನೈಋತ್ಯ ಭಾತದ ಸಿಚುವಾನ್ ಚೀನಾದ ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಾಂತ್ಯವಾಗಿದೆ. ಈವರೆಗೆ ಚೀನಾದಲ್ಲಿ ವಿವಾಹಿತರು ಎರಡು ಮಕ್ಕಳನ್ನು ಮಾತ್ರ ಹೊಂದಲು ಅವಕಾಶ ನೀಡಿತ್ತು. ಇಲ್ಲಿಯವರೆಗೆ ಸಿಚುವಾನ್​ ಆರೋಗ್ಯ ಆಯೋಗದಲ್ಲಿ ದಂಪತಿಗಳು ಎರಡು ಮಕ್ಕಳನ್ನು ಮಾತ್ರ ಹೊಂದುವುದಾಗಿ ನೋಂದಾವಣೆ ಮಾಡಿಕೊಳ್ಳಬೇಕಾಗಿತ್ತು.

ಚೀನಾದ ರಾಷ್ಟ್ರೀಯ ಸಂತಾನೋತ್ಪತ್ತಿ ನೀತಿಗಳು ಅವಿವಾಹಿತ ಮಹಿಳೆಯರು ಮಕ್ಕಳನ್ನು ಹೊಂದುವುದನ್ನು ನಿಷೇಧಿಸದಿದ್ದರೂ, ಪ್ರಸವಪೂರ್ವ ಆರೋಗ್ಯ ರಕ್ಷಣೆ, ಮಾತೃತ್ವ ರಜೆ ಸಮಯದಲ್ಲಿ ತಾಯಿಯ ಸಂಬಳ ಮತ್ತು ಉದ್ಯೋಗ ರಕ್ಷಣೆ ಸೇರಿದಂತೆ ಉಚಿತ ಸೇವೆಗಳನ್ನು ನೀಡಲು ಪೋಷಕರಿಗೆ ಮದುವೆಯಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

2022 ರಲ್ಲಿ ಚೀನಾದ ಜನಸಂಖ್ಯೆಯು ಆರು ದಶಕಗಳಲ್ಲಿ ಮೊದಲ ಬಾರಿಗೆ ಕಡಿಮೆಯಾಗಿತ್ತು. ವರದಿಯ ಪ್ರಕಾರ, ಚೀನಾದ ಜನಸಂಖ್ಯೆಯ ಸುಮಾರು 21 ಪ್ರತಿಶತದಷ್ಟು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರು. ಹೀಗಾಗಿ ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾ ತನ್ನ ಕಾನೂನಿನಲ್ಲಿ ಕೆಲ ತಿದ್ದುಪಡಿಗಳನ್ನು ಬದಲಾಯಿಸಿದೆ.

ಸಿಚುವಾನ್​ನಲ್ಲಿ ನಿಯಮ ತಿದ್ದುಪಡಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿದ್ದು, ಕೆಲವು ಜನರು ಇದು ವಿವಾಹೇತರ ಸಂಬಂಧಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಬಾಡಿಗೆ ತಾಯ್ತನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)