ನವದೆಹಲಿ: ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದ್ದ ಡೋಕ್ಲಾಮ್ ಸಮೀಪದ ಭೂತಾನ್ ಪ್ರದೇಶದೊಳಗೆ 2 ಕಿ.ಮೀ ದೂರದಲ್ಲಿ ಪಾಂಗ್ಡಾ ಎಂಬ ಹೊಸ ಹಳ್ಳಿಯೊಂದನ್ನು ಚೀನಾ ಸೃಷ್ಟಿಸಿದೆ ಎಂದು ತಿಳಿದುಬಂದಿದೆ. ಚೀನಾದ ಸಿಜಿಟಿಎನ್ ನ್ಯೂಸ್ನ ಹಿರಿಯ ಪರ್ತಕರ್ತ ಶೆನ್ ಶಿವೇ ಎಂಬುವವರು ಈ ಕುರಿತು ಸರಣಿ ಟ್ವೀಟ್ಗಳ ಮೂಲಕ ಮಾಹಿತಿ ನೀಡಿದ್ದಾರೆ.
ನಕ್ಷೆಗಳನ್ನೂ ಟ್ವೀಟ್ ಮಾಡಿರುವ ಅವರು ಹೊಸ ಹಳ್ಳಿಯನ್ನು ಸ್ಥಾಪಿಸಲಾದ ನಿಖರ ಸ್ಥಳ ತೋರಿಸಿದ್ದಾರೆ. ಬಳಿಕ ಈ ಟ್ವೀಟ್ಗಳನ್ನು ಅಳಿಸಿ ಹಾಕಲಾಗಿದೆ. ಹಳ್ಳಿಯ ಪಶ್ಚಿಮಕ್ಕೆ ಸಿಕ್ಕಿಂ, ಉತ್ತರಕ್ಕೆ ಚೀನಾ ಇದೆ. ಡೋಕ್ಲಾಮ್ಲ್ಲಿ ಚೀನಿ ಸೈನಿಕರೊಂದಿಗೆ 2017ರಲ್ಲಿ ಮುಖಾಮುಖಿ ನಡೆದ ಸ್ಥಳದಿಂದ 9 ಕಿ.ಮೀ ದೂರದಲ್ಲಿ ಹೊಸ ಹಳ್ಳಿ ಇದೆ. ಭೂತಾನ್ನ ಭಾಗವನ್ನು ಹಂತಹಂತವಾಗಿ ಆಕ್ರಮಿಸಿಕೊಳ್ಳುತ್ತಿರುವ ಚೀನಾ ಅಲ್ಲಿ ತನ್ನ ಜನಸಂಖ್ಯೆಯನ್ನೂ ಹೆಚ್ಚಿಸುತ್ತಿದೆ.
ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 2.5 ಕಿ.ಮೀ ಒಳಹೋಗಿ ಗ್ರಾಮವನ್ನು ಸ್ಥಾಪಿಸಿದೆ. ಇದು ಭಾರತಕ್ಕೆ ಆತಂಕಕಾರಿ ವಿಷಯವಾಗಿದೆ ಎಂದು ಪತ್ರಕರ್ತ ಶೇನ್ ಶಿವೇ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭೂಪ್ರದೇಶದಲ್ಲಿ ಚೀನಾಗೆ ಹಳ್ಳಿ ನಿರ್ವಿುಸಲು ಅವಕಾಶ ನೀಡಿರುವ ಬಗ್ಗೆ ಭೂತಾನ್ ಈವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.