ನ್ಯೂಸ್

ಇಬ್ಬರು ಮೇಜರ್​,​ 10 ಯೋಧರ ಬಿಡುಗಡೆ ಮಾಡಿದ ಚೀನಾ?

ನವದೆಹಲಿ: ಈಶಾನ್ಯ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ನಂತರ, ಭಾರತದ ಸೇನೆಯ ಇಬ್ಬರು ಮೇಜರ್ ಸೇರಿದಂತೆ ಹತ್ತು ಮಂದಿ ಯೋಧರನ್ನು ಚೀನಾ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ. ಘರ್ಷಣೆಯ ನಂತರ ಎರಡೂ ದೇಶಗಳ ನಡುವೆ ಮಾತುಕತೆ ನಡೆದ ನಂತರ ನಿನ್ನೆ ರಾತ್ರಿಯ ವೇಳೆ ಈ ಬೆಳವಣಿಗೆ ಕಂಡಿರುವುದಾಗಿ ಹೇಳಲಾಗಿದೆ.

ಸಂಘರ್ಷದ ವೇಳೆ ಯಾವುದೇ ಭಾರತೀಯ ಯೋಧರು ನಾಪತ್ತೆಯಾಗಿಲ್ಲ ಎಂದು ಸೇನೆ ನಿನ್ನೆ ಹೇಳಿಕೆ ನೀಡಿತ್ತು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೇನೆ ನೀಡಿರಲಿಲ್ಲ. ಈ ನಡುವೆಯೇ ಯೋಧರ ಬಿಡುಗಡೆಯ ಕುರಿತು ವರದಿಯಾಗಿದೆ. ಆದರೆ ಅಧಿಕಾರಿಗಳ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.

ಈಗ ಬಂದಿರುವ ವರದಿಗಳ ಅನ್ವಯ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳ ಮಾತುಕತೆಯ ನಂತರ ಇಂಥದ್ದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತೊಂದು ವರದಿಯ ಪ್ರಕಾರ, ಸೋಮವಾರ ನಡೆದ ಘರ್ಷಣೆಯಲ್ಲಿ 76 ಭಾರತೀಯ ಸೈನಿಕರು ಗಾಯಗೊಂಡಿದ್ದರು. ಅದರಲ್ಲಿ 18 ಮಂದಿಗೆ ಗಂಭೀರ ಗಾಯಗಳಾಗಿದ್ದು, 58 ಯೋಧರಿಗೆ ಅಲ್ಪ ಗಾಯಗಳಾಗಿವೆ. 18 ಯೋಧರು ಲೇಹ್​ನಲ್ಲಿರುವ ಆಸ್ಪತ್ರೆಯಲ್ಲಿ ಹಾಗೂ ಉಳಿದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

1967ರ ನಾಥು ಲಾ ಪಾಸ್ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ದೇಶಗಳ ನಡುವೆ ನಡೆದ ಅತ್ಯಂದ ದೊಡ್ಡ ಮಟ್ಟದ ಸಂಘರ್ಷ ಇದು ಎನ್ನಲಾಗಿದೆ. 1967ರ ಸಂಘರ್ಷದಲ್ಲಿ ಭಾರತೀಯ ಸೇನೆ 8 ಸೈನಿಕರನ್ನು ಹಾಗೂ ಚೀನಾ 300ಕ್ಕೂ ಹೆಚ್ಚು ಸೈನಿಕರು ಕಳೆದುಕೊಂಡಿದ್ದವು. (ಏಜೆನ್ಸೀಸ್​)