ನ್ಯೂಸ್

ಕರೊನಾ ವಿಚಾರದಲ್ಲಿ ಸುಳ್ಳಿನ ಮಹಾಗೋಡೆ ಕಟ್ಟಿತೇ ಚೀನಾ? ಎಚ್ಚರಿಸಿದ ವೈದ್ಯನನ್ನೇ ಶಿಕ್ಷಿಸಿ ಸಾವಿಗೆ ಕಾರಣರಾದರಾ?

ವುಹಾನ್​: ಕರೊನಾ ವೈರಸ್ ಸ್ಪೋಟ ಹಾಗೂ ಸಾವಿನ ಸಂಖ್ಯೆ​ಯಲ್ಲದೆ ಈವರೆಗೂ ಸತ್ಯ ನುಡಿಯದ ಚೀನಾ, ಕರೊನಾ ವಿಚಾರ ಮಾತನಾಡುವಾಗಲೆಲ್ಲಾ ಪ್ರತಿ ಹಂತದಲ್ಲೂ ಮಹತ್ವದ ಮಾಹಿತಿಯನ್ನು ಮುಚ್ಚಿ ಹಾಕಿ ಸುಳ್ಳಗಳನ್ನು ಹೇಳಿಕೊಂಡು ಬಂದಿದ್ದು, ಅಲ್ಲಿನ ಪರಿಣಿತರು, ಪರಿವೀಕ್ಷಕರು ಮತ್ತು ರಾಜಕಾರಣಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಾರಂಭದಲ್ಲಿ ವೈರಸ್​ ಸ್ಪೋಟಗೊಂಡಿದ್ದನ್ನು ಗಮನಿಸಿ ಎಚ್ಚರಿಕೆ ನೀಡದ ವೈದ್ಯ ವೆನ್​ಲಿಯಾಂಗ್​ರನ್ನು ಚೀನಾ ಸರ್ಕಾರ ಶಿಕ್ಷಿಸಿತು ಎಂದು ತಿಳಿದುಬಂದಿದೆ. ಈ ಸಂಬಂಧದ ತನಿಖೆಯಲ್ಲೂ ವೆನ್​ಲಿಯಾಂಗ್​ ಮಾಹಿತಿ ಸರಿಯಿದೆ. ಅವರು ವದಂತಿ ಹರಡಿಸಿಲ್ಲ ಎಂದು ಹೇಳಿದೆ. ವರದಿ ಬೆನ್ನಲ್ಲೇ ಚೀನಾ ಸರ್ಕಾರ ವೆನ್​ಲಿಯಾಂಗ್​ ಕುಟುಂಬದ ಕ್ಷಮೆಯನ್ನು ಕೇಳಿತ್ತು.

ಇಷ್ಟೇ ಅಲ್ಲದೆ, ವೈರಸ್​ ಮನಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಎಂಬುದನ್ನು ಚೀನಾ ನಿರಾಕರಿಸಿತು ಮತ್ತು ವೈರಸ್​ ಪೀಡಿತ ಪ್ರದೇಶಗಳಲ್ಲಿ ಲಾಕ್​ಡೌನ್​ ಹೇರಲು ವಿಳಂಬ ಮಾಡಿತು. ಇದೆಲ್ಲವನ್ನು ಸಕಾಲದಲ್ಲಿ ಮಾಡಿದ್ದರೆ ವೈರಸ್​ ಹರಡುವುದನ್ನೇ ಚೀನಾ ತಡೆಯಬಹುದಿತ್ತು. ಇಂದು ಇಷ್ಟೊಂದು ಸಾವು-ನೋವು ಸಂಭವಿಸುತ್ತಲೇ ಇರಲಿಲ್ಲ.

ಯಾವಾಗ ವೈರಸ್​ ಹರಡಲು ಆರಂಭವಾಯಿತೋ ಕಮ್ಯೂನಿಷ್ಟ್​ ಪಾರ್ಟಿ ನೇತೃತ್ವದ ಚೀನಾ ಸರ್ಕಾರ ಮಾಡಿದ ಮೊದಲ ಕೆಲಸವೆಂದರೆ, ಸಾರ್ವಜನಿಕ ಮಾಹಿತಿಗೆ ಸೆನ್ಸಾರ್​ ಹಾಕಿತು. ಬದಲಾಗಿ ತಪ್ಪು ಮಾಹಿತಿಯನ್ನೇ ಹರಡಿತು. ಒಂದು ಹೆಜ್ಜೆ ಮುಂದು ಹೋಗಿ ಅಮೆರಿಕ ಸೇನಾಪಡೆಗಳೇ ವೈರಸ್​ ಹೊತ್ತುತಂದಿದ್ದಾರೆ ಎಂದು ಆರೋಪ ಹೊರಿಸಿಬಿಡ್ತು.

ಚೀನಾದ ಪ್ರಮುಖ ರಾಜಕಾರಣಿಗಳು ಸಹ ಸರ್ಕಾರದ ನಡೆಯನ್ನು ಟೀಕಿಸಿ ಸಾವಿನ ಸಂಖ್ಯೆ ಕುರಿತು ನೀಡಿರುವ ವರದಿ ತಪ್ಪೆಂದು ಹೇಳಿದ್ದಾರೆ. ಇನ್ನು ವೈರಸ್​ ತವರು ವುಹಾನ್​ನಲ್ಲಿ ಸಾವಿನ ಸಂಖ್ಯೆ ಈಗ ನೀಡಿರುವುದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿರಬಹುದೆಂದು ಅಂದಾಜಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗಷ್ಟೇ ಚೀನಾ ಸರ್ಕಾರ ಸುಮಾರು 5 ಸಾವಿರಕ್ಕೂ ಹೆಚ್ಚು ಚಿತಾಭಸ್ಮವುಳ್ಳ ಮಡಿಕೆಗಳನ್ನು ಮೃತರ ಕುಟುಂಬಗಳಿಗೆ ವಿತರಿಸಿದ್ದಾರೆ.

ಹೀಗೆ ಪ್ರತಿಹಂತದಲ್ಲೂ ಕರೊನಾ ವೈರಸ್​ ವಿಚಾರವಾಗಿ ಸುಳ್ಳುಗಳ ಮಹಾಗೋಡೆಯನ್ನು ಕಟ್ಟಿಕೊಂಡು ಬಂದಿರುವ ಚೀನಾ ಸರ್ಕಾರದ ಮಾತನ್ನು ನಂಬುವುದಾದರೂ ಹೇಗೆ ಎಂಬ ಚರ್ಚೆ ಅಲ್ಲಿನ ಗಣ್ಯರ ವಲಯದಲ್ಲೇ ನಡೆದಿದೆ. (ಏಜೆನ್ಸೀಸ್​)