ನ್ಯೂಸ್

ಲಡಾಖ್​ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ ಚೀನಾ, ಚೀನಿಯರನ್ನು ಕರೆಯಿಸಿಕೊಳ್ಳಲು ಮುಂದಾದ ರಾಯಭಾರ ಕಚೇರಿ

ಲಡಾಖ್​: ಭಾರತ- ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ರಸ್ತೆ ನಿರ್ಮಾಣ ಸೇರಿ ಇತರ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ಭಾರತದ ವಿರುದ್ಧ ಕೆಂಡ ಕಾರುತ್ತಿರುವ ಚೀನಾ ಗಡಿಗೆ ಸಮೀಪದ ವಾಯುನೆಲೆಯಲ್ಲಿ ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.

ಕಾರ್ಗಿಲ್​ ಬಳಿಕ ಭಾರತದ ಗಡಿಯಲ್ಲಿ ಉಂಟಾಗಿರುವ ಅತ್ಯಂತ ಉದ್ವಿಗ್ನದ ಸ್ಥಿತಿ ಇದಾಗಿದೆ ಎಂದೇ ವಿಶ್ಲೇಷಿಸಲಾಗಿದೆ. ಇದಲ್ಲದೇ. ಭಾರತದಲ್ಲಿರುವ ಚೀನಿಯರು ಇಚ್ಛಿಸಿದಲ್ಲಿ ಅವರನ್ನು ದೇಶಕ್ಕೆ ಕರೆಯಿಸಿಕೊಳ್ಳುವುದಾಗಿ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ. ಆದರೆ, ವಿಮಾನ ಪ್ರಯಾಣದ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ತಿಳಿಸಿದೆ.

ಟಿಬೆಟ್​ನ ನಗರಿ ಗುನ್ಸಾ ವಾಯುನೆಲೆಯನ್ನು ಕೆಲ ವರ್ಷಗಳ ಹಿಂದೆಯೇ ಚೀನಾ ಸ್ಥಾಪಿಸಿದೆ. ಇದು ಸದ್ಯ ವಿವಾದಕ್ಕೆ ಕಾರಣವಾಗಿರುವ ಹಾಗೂ ಚೀನಿ ಸೇನೆ ಬೀಡುಬಿಟ್ಟಿರುವ ಪಾನ್​ಗಾಂಗ್​ ಸರೋವರದಿಂದ 200 ಕಿ.ಮೀ. ದೂರದಲ್ಲಿದೆ. ಅಚ್ಚರಿಯ ವಿಷಯವೆಂದರೆ, ಒಂದೇ ತಿಂಗಳಲ್ಲಿ ಈ ವಾಯುನೆಲೆಯಲ್ಲಿ ಭಾರಿ ಪ್ರಮಾಣದ ನಿರ್ಮಾಣ ಕಾರ್ಯಗಳು ನಡೆದಿವೆ.

ಇಲ್ಲಿನ ರನ್​ ವೇ ಅಭಿವೃದ್ಧಿಪಡಿಸಲಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಚೀನಾ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಜೆ-11 ಅಥವಾ ಜೆ-16 ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ. ಇದೆಲ್ಲ ಕಾರ್ಯಾಚರಣೆ ಒಂದು ತಿಂಗಳಲ್ಲಿ ನಡೆದಿದೆ.

ಚೀನಾ ಈ ಕುತಂತ್ರ ಬಯಲಾಗಿದ್ದು ಉಪಗ್ರಹ ಆಧಾರಿತ ಚಿತ್ರಗಳ ಮೂಲಕ. ಶ್ಯಾಡೋ ಬ್ರೇಕ್​ ಇಂಟರ್​ನ್ಯಾಷನಲ್​ ಕಂಪನಿಯ ಡೆಟ್ರೆಸ್ಫಾ ಎಂಬ ಗೂಢಚಾರ ತಾಂತ್ರಿಕತೆಯ ಸಹಾಯದಿಂದ ಇಲ್ಲಿನ ಚಟುವಟಿಕೆಗಳ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ಭೂಮಟ್ಟದಿಂದ ಅಂದಾಜು 14,450 ಅಡಿ ಎತ್ತರದಲ್ಲಿರುವ ಈ ವಾಯುನೆಲೆ ಸದ್ಯ ಜಗತ್ತಿನಲ್ಲಿ ಅತಿ ಎತ್ತರದ ವಾಯುನೆಲೆಗಳಲ್ಲಿ ಒಂದಾಗಿದೆ. ಏಪ್ರಿಲ್​ 6ರಂದು ಸೆರೆ ಹಿಡಿಯಲಾದ ಚಿತ್ರಕ್ಕೂ ಮೇ 21ರಂದು ತೆಗೆಯಲಾದ ಚಿತ್ರದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ.

ಈ ಎತ್ತರದಿಂದ ಯುದ್ಧ ವಿಮಾನಗಳು ಒಂದು ಗಂಟೆಯಷ್ಟೇ ಕಾರ್ಯಾಚರಣೆ ನಡೆಸಲು ಸಾಧ್ಯ. ಭಾರತದಿಂದ ಕಾರ್ಯಾಚರಣೆಗಿಳಿಯುವ ಯುದ್ಧ ವಿಮಾನಗಳು 2-3 ತಾಸು ಹೋರಾಟ ನಡೆಸಬಲ್ಲವು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಹೀಗಾಗಿ ಭಾರತ ಇದರಿಂದ ಹೆಚ್ಚು ಕಳವಳ ಪಡಬೇಕಿಲ್ಲ ಎನ್ನುತ್ತಾರೆ.